ವೆಸ್ಟ್ ಇಂಡೀಸ್ ತಂಡವು ಟಿ20 ವಿಶ್ವಕಪ್ಗಾಗಿ ಭರ್ಜರಿ ತಯಾರಿಯಲ್ಲಿರುವಾಗಲೇ, ಇತ್ತ ಪ್ರಮುಖ ಆಟಗಾರ ಜಾನ್ ಕ್ಯಾಂಪ್ಬೆಲ್ಗೆ ಕ್ರಿಕೆಟ್ನಿಂದ ನಾಲ್ಕು ವರ್ಷ ನಿಷೇಧ ಹೇರಲಾಗಿದೆ. ಡೋಪಿಂಗ್ ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರರನ್ನು ಬ್ಯಾನ್ ಮಾಡಲಾಗಿದೆ. ಕ್ರೀಡೆಗಳಲ್ಲಿ ಮಾದಕ ವಸ್ತು ಸೇವನೆ(ಡೋಪಿಂಗ್) ನಿರ್ಮೂಲನೆಗಾಗಿ ಡೋಪಿಂಗ್ ಟೆಸ್ಟ್ಗಳನ್ನು ಮಾಡಲಾಗುತ್ತದೆ. ಆದರೆ ಜಾನ್ ಕ್ಯಾಂಪ್‌ಬೆಲ್ ಅವರು ಏಪ್ರಿಲ್‌ನಲ್ಲಿ ರಕ್ತದ ಮಾದರಿಯನ್ನು ನೀಡಲು ನಿರಾಕರಿಸಿದ್ದಾರೆ.
ಕ್ರೀಡಾಪಟುಗಳು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯನ್ನು ಮಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು. ಅದರಂತೆ ಇದೀಗ ಜಮೈಕಾ ಡೋಪಿಂಗ್ ಆಯೋಗದ (JADCO) ವಿಂಡೀಸ್ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಹೀಗಾಗಿ ವೆಸ್ಟ್ ಇಂಡೀಸ್ ಆಟಗಾರನ ಮೇಲೆ ನಿಷೇಧ ಹೇರಲಾಗಿದೆ.
ಜನವರಿ 2019 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಕ್ಯಾಂಪ್‌ಬೆಲ್, ಈ ವರ್ಷದ ಆರಂಭದಲ್ಲಿ ನಡೆದ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯದಾಗಿ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಿದ್ದರು. 29ರ ಹರೆಯದ ಆರಂಭಿಕ ಆಟಗಾರ 20 ಟೆಸ್ಟ್‌ಗಳು, ಆರು ಏಕದಿನ ಮತ್ತು ಎರಡು ಟಿ20 ಪಂದ್ಯಗಳಲ್ಲಿ ವಿಂಡೀಸ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.
20 ಟೆಸ್ಟ್‌ಗಳಲ್ಲಿ, ಎಡಗೈ ಬ್ಯಾಟರ್ ಮೂರು ಅರ್ಧಶತಕಗಳೊಂದಿಗೆ 888 ರನ್ ಕಲೆಹಾಕಿದ್ದಾರೆ. ಹಾಗೆಯೇ 2019 ರಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 137 ಎಸೆತಗಳಲ್ಲಿ 15 ಬೌಂಡರಿ ಮತ್ತು ಆರು ಸಿಕ್ಸರ್‌ಗಳೊಂದಿಗೆ 179 ರನ್ ಬಾರಿಸಿ ಮಿಂಚಿದ್ದರು. ಇದೀಗ ಡೋಪಿಂಗ್ ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಜಾನ್ ಕ್ಯಾಂಪ್ಬೆಲ್ಗೆ ಕ್ರಿಕೆಟ್ನಿಂದ ನಾಲ್ಕು ವರ್ಷ ನಿಷೇಧ ಹೇರಲಾಗಿದ್ದು, ಹೀಗಾಗಿ ಮತ್ತೆ ಮೈದಾನಕ್ಕೆ ಮರಳಲು 2026 ರವರೆಗೆ ಕಾಯಲೇಬೇಕು.
ಸದ್ಯ ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡುತ್ತಿದೆ. ಈ ಸರಣಿಯ ಬಳಿಕ ಟಿ20 ವಿಶ್ವಕಪ್ನಲ್ಲಿ ಅರ್ಹತಾ ಪಂದ್ಯಗಳನ್ನು ಆಡಲಿದೆ. ಅದರಂತೆ ಅಕ್ಟೋಬರ್ 17 ರಂದು ಹೋಬರ್ಟ್‌ನಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.