T20 World Cup 2022: ಟೀಮ್ ಇಂಡಿಯಾಗೆ ಎಚ್ಚರಿಕೆ: ಪಾಕ್ ಸ್ಟಾರ್ ಆಟಗಾರ ಎಂಟ್ರಿ..!
Shaheen Shah Afridi: ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯಲಿರುವ ಭಾರತದ ವಿರುದ್ಧ ಪಂದ್ಯದ ಮೂಲಕ ಶಾಹೀನ್ ಅಫ್ರಿದಿ ಕಂಬ್ಯಾಕ್ ಮಾಡಲಿದ್ದಾರೆ.
T20 World Cup 2022: ಚುಟುಕು ಕ್ರಿಕೆಟ್ ಕದನ ಟಿ20 ವಿಶ್ವಕಪ್ಗಾಗಿ ದಿನಗಣನೆ ಶುರುವಾಗಿದೆ. ಅಕ್ಟೋಬರ್ 16 ರಿಂದ ಶುರುವಾಗಲಿರುವ ಈ ಟೂರ್ನಿಯಲ್ಲಿ ಮೊದಲು ಅರ್ಹತಾ ಪಂದ್ಯಗಳು ನಡೆಯಲಿದೆ. ಇನ್ನು ಅಕ್ಟೋಬರ್ 22 ರಿಂದ ಸೂಪರ್-12 ಪಂದ್ಯಗಳು ಜರುಗಲಿದೆ. ವಿಶೇಷ ಎಂದರೆ ಟೀಮ್ ಇಂಡಿಯಾ (Team India) ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (India vs Pakistan) ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆದರೆ ಈ ಬಾರಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳುವುದಿಲ್ಲ. ಬೆನ್ನು ನೋವಿನ ಕಾರಣ ಬುಮ್ರಾ ಟಿ20 ವಿಶ್ವಕಪ್ ತಪ್ಪಿಸಿಕೊಂಡಿದ್ದಾರೆ. ಆದರೆ ಮತ್ತೊಂದೆಡೆ ಪಾಕಿಸ್ತಾನದ ಮಾರಕ ವೇಗಿ ಶಾಹೀನ್ ಶಾ ಅಫ್ರಿದಿ ಈ ಪಂದ್ಯಕ್ಕಾಗಿ ಸಂಪೂರ್ಣ ಫಿಟ್ ಆಗಿದ್ದಾರೆ.
ಶಾಹೀನ್ ಅಫ್ರಿದಿ ಏಷ್ಯಾಕಪ್ ಆರಂಭಕ್ಕೂ ಮುನ್ನ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಕಳೆದ ಒಂದು ತಿಂಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಲಂಡನ್ನಲ್ಲಿ ಚಿಕಿತ್ಸೆ ಪೂರೈಸಿರುವ ಅಫ್ರಿದಿ ಟಿ20 ವಿಶ್ವಕಪ್ಗೆ ಸಜ್ಜಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ, ಶಾಹೀನ್ ಅಫ್ರಿದಿ ಸಂಪೂರ್ಣ ಫಿಟ್ ಆಗಿದ್ದಾರೆ. ಅಲ್ಲದೆ ಅವರು ಭಾರತ – ಪಾಕಿಸ್ತಾನ್ ನಡುವಣ ಮೊದಲ ಪಂದ್ಯಕ್ಕೆ ಲಭ್ಯರಿರಲಿದ್ದಾರೆ ಎಂದು ತಿಳಿಸಿದ್ದಾರೆ. ಅದರಂತೆ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯಲಿರುವ ಭಾರತದ ವಿರುದ್ಧ ಪಂದ್ಯದ ಮೂಲಕ ಶಾಹೀನ್ ಅಫ್ರಿದಿ ಕಂಬ್ಯಾಕ್ ಮಾಡಲಿದ್ದಾರೆ.
ಟೀಮ್ ಇಂಡಿಯಾಗೆ ಎಚ್ಚರಿಕೆ:
ಟಿ20 ವಿಶ್ವಕಪ್ 2021 ರಲ್ಲಿ ಟೀಮ್ ಇಂಡಿಯಾ ಪಾಲಿಗೆ ಮಾರಕವಾಗಿ ಪರಿಣಮಿಸಿದ್ದ ಶಾಹೀನ್ ಶಾ ಅಫ್ರಿದಿ ಇದೀಗ ಭಾರತದ ವಿರುದ್ಧದ ಪಂದ್ಯದ ಮೂಲಕ ಮರಳುತ್ತಿದ್ದಾರೆ. ಕಳೆದ ಬಾರಿಯ ಮುಖಾಮುಖಿಯಲ್ಲಿ ಅಫ್ರಿದಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೀಗ ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳ ಮೂಲಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳುತ್ತಿರುವ ಶಾಹೀನ್ ಅಫ್ರಿದಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಶಾಹೀನ್ ಅಫ್ರಿದಿ ಇಲ್ಲದೆಯೂ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕ್ ಜಯ ಸಾಧಿಸಿತ್ತು. ಹೀಗಾಗಿ ಈ ಬಾರಿ ಮತ್ತಷ್ಟು ಬಲಿಷ್ಠ ಪಡೆಯೊಂದಿಗೆ ಪಾಕ್ ಕಣಕ್ಕಿಳಿಯುತ್ತಿದೆ. ಇದಾಗ್ಯೂ ಆಸೀಸ್ ನೆಲದಲ್ಲಿ ಕಳೆದ ಬಾರಿಯ ಟಿ20 ವಿಶ್ವಕಪ್ ಸೋಲಿನ ಸೇಡನ್ನು ಟೀಮ್ ಇಂಡಿಯಾ ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಪಾಕಿಸ್ತಾನ್ ಟಿ20 ವಿಶ್ವಕಪ್ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರಿ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಉಸ್ಮಾನ್ ಖಾದಿರ್
ಮೀಸಲು ಆಟಗಾರರು- ಫಖರ್ ಜಮಾನ್, ಶಹನವಾಜ್ ದಹಾನಿ ಮತ್ತು ಮೊಹಮ್ಮದ್ ಹ್ಯಾರಿಸ್