ಎರಡು ಬಾರಿಯ ಟಿ20 ವಿಶ್ವಕಪ್ (T20 World Cup) ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ 8ನೇ ಆವೃತ್ತಿಯ ಟಿ20 ವಿಶ್ವಕಪ್‌ನಿಂದ (T20 World Cup 2022) ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದೆ. ಶುಕ್ರವಾರ, ಐಲೆಂಡ್ ತಂಡವನ್ನು ಎದುರಿಸಿದ ನಿಕೋಲಸ್ ಪೂರನ್ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಏಕೆಂದರೆ ಅರ್ಹತಾ ಸುತ್ತಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ವಿಂಡೀಸ್ ತಂಡ ಒಂದರಲ್ಲಿ ಸೋತು ಒಂದರಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಸೂಪರ್ 12 ಸುತ್ತಿಗೆ ಎಂಟ್ರಿಕೊಡಬೇಕಿದ್ದರೆ, ವಿಂಡೀಸ್ ಬಳಗ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಎರಡು ಬಾರಿಯ ವಿಶ್ವ ಚಾಂಪಿಯನ್ಗೆ ಐರ್ಲೆಂಡ್ ತಂಡ ಬರೋಬ್ಬರಿ 9 ವಿಕೆಟ್ಗಳ ಸೋಲಿನ ಶಾಕ್ ನೀಡುವುದರೊಂದಿಗೆ ಕೆರಿಬಿಯನ್ ದೈತ್ಯರಿಗೆ ಟಿ20 ವಿಶ್ವಕಪ್‌ನಿಂದ ಗೇಟ್ಪಾಸ್ ನೀಡಿತು. ಸೂಪರ್ 12 ಸುತ್ತಿಗೂ ಎಂಟ್ರಿಕೊಡಲಾಗದೆ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್ ತಂಡದ ಆಟಗಾರರು ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರನಡೆದರು.
ಅದರಲ್ಲೂ ಸೋಲಿನ ನಂತರ ತಂಡದ ನಾಯಕ ಪೂರನ್ ತುಂಬಾ ಭಾವುಕರಾಗಿ ಕಾಣುತ್ತಿದ್ದರು. ಹೀಗಾಗಿ ತಂಡದ ಉಳಿದ ಆಟಗಾರರು ಅವರನ್ನು ಸಂತೈಸುವುದರೊಂದಿಗೆ ಸಮಾದಾನ ಪಡಿಸಿದರು. ಆದರೂ ತನ್ನ ನೋವನ್ನು ತಡೆದಿಟ್ಟುಕೊಳ್ಳದ ಪೂರನ್, ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ನಲ್ಲಿ ತೀರ ಭಾವುಕರಾಗಿ ಮಾತನಾಡಿದರು. ಅವರ ಕಣ್ಣುಗಳಲ್ಲಿ ನೀರು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಸೋಲಿನ ಬಗ್ಗೆ ಮಾತನಾಡಿದ ಪೂರನ್, ಇದು ಕಷ್ಟದ ಸಮಯ. ಟೂರ್ನಿಯುದ್ದಕ್ಕೂ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಉತ್ತಮ ಪಿಚ್‌ನಲ್ಲಿ ನಾವು ಕೇವಲ 145 ರನ್ ಗಳಿಸಿದರೆ, ನಮ್ಮ ಬೌಲರ್‌ಗಳಿಗೆ ಪಂದ್ಯವನ್ನು ಉಳಿಸುವುದು ಕಷ್ಟವಾಗುತ್ತದೆ ಎಂದರು.
ಸಹ ಆಟಗಾರರನ್ನು ಹೊಗಳಿದ ಪೂರನ್
ಆದರೆ, ಎದುರಾಳಿ ತಂಡವನ್ನು ಹೊಗಳಿದ ಪೂರನ್, ಐರ್ಲೆಂಡ್ ತಂಡ ಉತ್ತಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ್ದು, ಅವರಿಗೆ ಅಭಿನಂದನೆಗಳು ಎಂದರು. ಆ ಬಳಿಕ ತಮ್ಮ ತಂಡದ ಬಗ್ಗೆ ಮಾತನಾಡಿದ ಪೂರನ್,ನಮ್ಮ ತಂಡಕ್ಕೆ ಕೆಲವು ಒಳ್ಳೆಯ ಸಂಗತಿಗಳು ಸಂಭವಿಸಿದ್ದು, ಅದರಲ್ಲಿ ಜೇಸನ್ ಹೋಲ್ಡರ್ ಮತ್ತೆ ಬೌಲಿಂಗ್ ಮಾಡುತ್ತಿದ್ದಾರೆ. ಹಾಗೆಯೇ ಕಿಂಗ್ ಕೂಡ ಈ ಟೂರ್ನಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು, ಜೋಸೆಫ್ ಕೂಡ ಉತ್ತಮ ಬೌಲಿಂಗ್ ಮಾಡಿದರು ಎಂದರು. ಹಾಗೆಯೇ ಈ ಟೂರ್ನಿ ನಮಗೊಂದು ಪಾಠವಾಗಿತ್ತು,ಆದರೆ ನಮ್ಮ ಪ್ರದರ್ಶನದಿಂದ ನಾವು ಸಾಕಷ್ಟು ನಿರಾಶೆಗೊಂಡಿದ್ದೇವೆ. ಅಲ್ಲದೆ ನಮ್ಮ ಅಭಿಮಾನಿಗಳಿಗೂ ನಾವು ನಿರಾಸೆ ಮೂಡಿಸಿದ್ದೇವೆ. ನನ್ನ ಪ್ರದರ್ಶನದಿಂದ ನನ್ನ ಸಹ ಆಟಗಾರರನ್ನು ನಿರಾಸೆಗೊಳಿಸಿದ್ದೇನೆ ಎಂದು ಪೂರನ್ ಭಾವುಕರಾಗಿ ಮಾತನಾಡಿದರು.
ಇದನ್ನೂ ಓದಿ: T20 World Cup 2022: ಅರ್ಹತಾ ಸುತ್ತಿನಲ್ಲೇ ಎರಡು ಚಾಂಪಿಯನ್ ತಂಡಗಳಿಗೆ ಕ್ರಿಕೆಟ್ ಶಿಶುಗಳಿಂದ ಸೋಲಿನ ಶಾಕ್..!
ಈ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿದ ಪೂರನ್, ಕೇವಲ 25 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಪೂರನ್, ಸ್ಕಾಟ್ಲೆಂಡ್ ವಿರುದ್ಧ 5, ಜಿಂಬಾಬ್ವೆ ವಿರುದ್ಧ 7 ಮತ್ತು ಐರ್ಲೆಂಡ್ ವಿರುದ್ಧ 13 ರನ್ಗಳಿಗೆ ಸುಸ್ತಾಗಿದ್ದರು.
ಟಿ20 ವಿಶ್ವಕಪ್‌ನಿಂದ ವೆಸ್ಟ್ ಇಂಡೀಸ್ ಔಟ್
ವೆಸ್ಟ್ ಇಂಡೀಸ್ ತಂಡವು ಟೂರ್ನಿಯಲ್ಲಿ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡವಾಗಿದೆ. ಆದರೆ, ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯದ ಕಾರಣ ವೆಸ್ಟ್ ಇಂಡೀಸ್‌ಗೆ ಸೂಪರ್ 12ರಲ್ಲಿ ನೇರ ಪ್ರವೇಶ ಸಿಗಲಿಲ್ಲ. ಹೀಗಾಗಿ ಸೂಪರ್ 12 ಸುತ್ತಿಗೆ ಎಂಟ್ರಿಕೊಡಲು ಗುಂಪು ಸುತ್ತಿನಲ್ಲಿ ಆಡಬೇಕಾಗಿ ಬಂದಿತ್ತು. ಟೂರ್ನಿ ಆರಂಭಕ್ಕೂ ಮುನ್ನ ವಿಂಡೀಸ್ ಸುಲಭವಾಗಿ ಮುಂದಿನ ಸುತ್ತಿಗೆ ಹೋಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ತನ್ನ ಮೊದಲ ಪಂದ್ಯದಲ್ಲಿಯೇ ವೆಸ್ಟ್ ಇಂಡೀಸ್ 42 ರನ್‌ಗಳ ಸೋಲನುಭವಿಸಿತ್ತು.
ವೆಸ್ಟ್ ಇಂಡೀಸ್‌ಗೆ ಕೊನೆಯ ಸ್ಥಾನ
ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸುವ ಮೂಲಕ ವಿಂಡೀಸ್ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು. ಹೀಗಾಗಿ ಒಂದರಲ್ಲಿ ಸೋತು ಒಂದರಲ್ಲಿ ಗೆದ್ದಿದ್ದರಿಂದ ಸೂಪರ್ 12 ಗೆ ಹೋಗಬೇಕಿದ್ದರೆ ವಿಂಡೀಸ್ ತಂಡ ಐರ್ಲೆಂಡ್ ತಂಡವನ್ನು ಸೋಲಿಸುವುದು ಬಹಳ ಮುಖ್ಯವಾಗಿತ್ತು. ಆದರೆ ಐರ್ಲೆಂಡ್ ತಂಡ ಒಂಬತ್ತು ವಿಕೆಟ್‌ಗಳಿಂದ ವಿಂಡೀಸ್ ತಂಡವನ್ನು ಸೋಲಿಸುವ ಮೂಲಕ ಪೂರನ್ ಪಡೆಯ ಟಿ20 ವಿಶ್ವಕಪ್ ಪ್ರಯಾಣಕ್ಕೆ ಅಂತ್ಯ ಹಾಡಿತು. ಐರ್ಲೆಂಡ್ ತಂಡ ಪ್ರಸ್ತುತ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡ ಮೂರು ಪಂದ್ಯಗಳಲ್ಲಿ ಎರಡು ಸೋಲುಗಳೊಂದಿಗೆ ಗುಂಪು ಸುತ್ತಿನಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ