West Indies vs India, 3rd T20I: ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಕೈಲ್ ಮೇಯರ್ಸ್ ಹಾಗೂ ಬ್ರಾಂಡನ್ ಕಿಂಗ್ ವಿಂಡೀಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 55 ರನ್ ಪೇರಿಸಿದ ಬಳಿಕ ಮೇಯರ್ಸ್ (25) ಅಕ್ಷರ್ ಪಟೇಲ್ ಎಸೆತದಲ್ಲಿ ಔಟಾದರು.
ಆ ಬಳಿಕ ಬಂದ ಜಾನ್ಸನ್ ಚಾರ್ಲ್ಸ್ 12 ರನ್ಗಳಿಸಿ ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ಇನ್ನು ನಿಕೋಲಸ್ ಪೂರನ್ (20) ಕುಲ್ದೀಪ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು.
ಇನ್ನು 42 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಬ್ರಾಂಡನ್ ಕಿಂಗ್ಗೂ ಕುಲ್ದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 17 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ 123 ರನ್ ಕಲೆಹಾಕಿತ್ತು.
ಅಂತಿಮ ಓವರ್ಗಳಲ್ಲಿ ಬಿಗಿ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್ಗಳು ವೆಸ್ಟ್ ಇಂಡೀಸ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದೇ ವೇಳೆ ಮುಖೇಶ್ ಕುಮಾರ್ ಎಸೆತದಲ್ಲಿ ಶ್ರಿಮಾನ್ ಹೆಟ್ಮೆಯರ್ (9) ಕ್ಯಾಚಿತ್ತು ಹೊರನಡೆದರು. ಆದರೆ ಅರ್ಷದೀಪ್ ಸಿಂಗ್ ಎಸೆದ 19ನೇ ಓವರ್ನಲ್ಲಿ ರೋವ್‌ಮನ್ ಪೊವೆಲ್-ರೊಮಾರಿಯೊ ಜೊತೆಗೂಡಿ 17 ರನ್ ಬಾರಿಸಿದರು.
ಕೊನೆಯ ಓವರ್ನಲ್ಲಿ 11 ರನ್ ಬಾರಿಸುವ ಮೂಲಕ 19 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ನೊಂದಿಗೆ ಅಜೇಯ 40 ಬಾರಿಸಿದ ರೋವ್‌ಮನ್ ಪೊವೆಲ್ ವೆಸ್ಟ್ ಇಂಡೀಸ್ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 159 ಕ್ಕೆ ತಂದು ನಿಲ್ಲಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾಗೆ 160 ರನ್ಗಳ ಟಾರ್ಗೆಟ್ ನೀಡಿದೆ.
ಟೀಮ್ ಇಂಡಿಯಾ ಪರ 4 ಓವರ್ಗಳಲ್ಲಿ 28 ರನ್ ನೀಡಿ 3 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್ ಯಶಸ್ವಿ ಬೌಲರ್ ಎನಿಸಿಕೊಂಡರು.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.
ಇದನ್ನೂ ಓದಿ: ಪೂರನ್ ಪವರ್ಗೆ ಹಳೆಯ ದಾಖಲೆ ಉಡೀಸ್: ಟೀಮ್ ಇಂಡಿಯಾ ವಿರುದ್ದ ಹೊಸ ರೆಕಾರ್ಡ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್ (ನಾಯಕ), ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್.
Published On - 9:38 pm, Tue, 8 August 23