ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ನಡುವಣ ಟೆಸ್ಟ್ 2ನೇ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆಗಿತ್ತು. ವಿಂಡೀಸ್ ವೇಗಿ ಶಮರ್ ಜೋಸೆಫ್ ಅವರ ಮಾರಕ ದಾಳಿಗೆ ತತ್ತರಿಸಿದ್ದ ಸೌತ್ ಆಫ್ರಿಕಾ ತಂಡವು ಕೇವಲ 160 ರನ್ಗಳಿಸಿ ಪ್ರಥಮ ಇನಿಂಗ್ಸ್ ಕೊನೆಗೊಳಿಸಿತ್ತು. ಅತ್ತ ಶಮರ್ ಕೇವಲ 33 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಗಿದೆ. ನಾಂಡ್ರೆ ಬರ್ಗರ್ (3 ವಿಕೆಟ್) ಹಾಗೂ ವಿಯಾನ್ ಮುಲ್ಡರ್ (4 ವಿಕೆಟ್) ಅವರ ಕರಾರುವಾಕ್ ದಾಳಿಗೆ ಸೆಟೆದು ನಿಲ್ಲುವಲ್ಲಿ ವಿಫಲರಾದ ವಿಂಡೀಸ್ ದಾಂಡಿಗರು 144 ರನ್ಗಳಿಸಿ ಆಲೌಟ್ ಆಗಿದ್ದರು.
ಇನ್ನು 14 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡಕ್ಕೆ ಟೋನಿ ಡಿ ಜೋರ್ಜಿ (39) ಹಾಗೂ ಐಡೆನ್ ಮಾರ್ಕ್ರಾಮ್ (51) ಉತ್ತಮ ಆರಂಭ ಒದಗಿಸಿದ್ದಾರೆ. ಈ ಜೋಡಿಯು ಮೊದಲ ವಿಕೆಟ್ಗೆ 79 ರನ್ ಕಲೆಹಾಕಿತು.
ಆದರೆ ಈ ಜೋಡಿಯ ಪತನದೊಂದಿಗೆ ಕುಸಿತಕ್ಕೊಳಗಾದ ಸೌತ್ ಆಫ್ರಿಕಾ ತಂಡವು 139 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದೆ. ಈ ಹಂತದಲ್ಲಿ ಕಣಕ್ಕಿಳಿದ ಕೈಲ್ ವೆರ್ರೆನ್ನೆ 71 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ವಿಯಾನ್ ಮುಲ್ಡರ್ ಅಜೇಯ 34 ರನ್ ಕಲೆಹಾಕಿದ್ದಾರೆ.
ಈ ಉತ್ತಮ ಜೊತೆಯಾಟದ ಪರಿಣಾಮ ದ್ವಿತೀಯ ದಿನದಾಟದ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿತು.
ವಿಶೇಷ ಎಂದರೆ ಮೊದಲ ದಿನದಾಟದಲ್ಲೇ 17 ವಿಕೆಟ್ಗಳ ಪತನಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವು ಎರಡನೇ ದಿನದಾಟದ ಅಂತ್ಯಕ್ಕೆ 25 ವಿಕೆಟ್ ಕಳೆದುಕೊಂಡಿದೆ. ಅಂದರೆ ಉಭಯ ತಂಡಗಳು ಮೊದಲೆರಡು ದಿನದಾಟದಲ್ಲೇ ಆಲೌಟ್ ಆಗಿದ್ದು, ಇದೀಗ ಸೌತ್ ಆಫ್ರಿಕಾ ತಂಡ 5 ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶವನ್ನು ನಾಲ್ಕನೇ ದಿನದಾಟದೊಳಗೆ ನಿರೀಕ್ಷಿಸಬಹುದು.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ಮೈಕೈಲ್ ಲೂಯಿಸ್ , ಕೀಸಿ ಕಾರ್ಟಿ , ಅಲಿಕ್ ಅಥಾನಾಜೆ , ಕವೆಮ್ ಹಾಡ್ಜ್ , ಜೇಸನ್ ಹೋಲ್ಡರ್ , ಜೋಶುವಾ ಡ ಸಿಲ್ವಾ ( ವಿಕೆಟ್ ಕೀಪರ್ ) , ಗುಡಾಕೇಶ್ ಮೋಟಿ , ಜೋಮೆಲ್ ವಾರಿಕನ್ , ಶಮರ್ ಜೋಸೆಫ್ , ಜೇಡನ್ ಸೀಲ್ಸ್.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ಟೋನಿ ಡಿ ಜೋರ್ಜಿ , ಟ್ರಿಸ್ಟಾನ್ ಸ್ಟಬ್ಸ್ , ಟೆಂಬಾ ಬವುಮಾ (ನಾಯಕ) , ಡೇವಿಡ್ ಬೆಡಿಂಗ್ಹ್ಯಾಮ್ , ಕೈಲ್ ವೆರ್ರಿನ್ನೆ (ವಿಕೆಟ್ ಕೀಪರ್) , ವಿಯಾನ್ ಮುಲ್ಡರ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಡೇನ್ ಪಿಡ್ಟ್ , ನಾಂಡ್ರೆ ಬರ್ಗರ್.