
ಮೂರು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ಪಾಕಿಸ್ತಾನ ತಂಡ (West Indies vs Pakistan) ಟಿ20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡರೆ, ಏಕದಿನ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿದೆ. ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನವನ್ನು ಬರೋಬ್ಬರಿ 202 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ನಾಯಕ ಶಾಯ್ ಹೋಪ್ (Shai Hope) ಅವರ ಅಜೇಯ ಶತಕದ ಆಧಾರದ ಮೇಲೆ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 294 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಮೊಹಮ್ಮದ್ ರಿಜ್ವಾನ್ (Mohammad Rizwan) ನೇತೃತ್ವದ ಪಾಕಿಸ್ತಾನ ತಂಡವು 29.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಆಲೌಟ್ ಆಯಿತು.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಪಾಕಿಸ್ತಾನ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದಾದ ನಂತರ, ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯದಲ್ಲಿ ಡಕ್‌ವರ್ತ್ ಲೂಯಿಸ್ ನಿಯಮದಡಿಯಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಏಕದಿನ ಪಂದ್ಯ ಗೆದ್ದಿರುವ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದೆ. ಶತಕ ವೀರ ಶಾಯ್ ಹೋಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅತಿ ಹೆಚ್ಚು 10 ವಿಕೆಟ್‌ಗಳನ್ನು ಪಡೆದ ಜೇಡೆನ್ ಸೀಲ್ಸ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕಳಪೆ ಆರಂಭ ಕಂಡಿತು. ಬ್ರಾಂಡನ್ ಕಿಂಗ್ ಕೇವಲ ಐದು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ, ಎವಿನ್ ಲೂಯಿಸ್ ಮತ್ತು ಕೇಸಿ ಕಾರ್ಟಿ ಎರಡನೇ ವಿಕೆಟ್‌ಗೆ 47 ರನ್ ಸೇರಿಸಿದರು. ಲೆವಿಸ್ 54 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 37 ರನ್ ಗಳಿಸಿದರೆ, ಕಾರ್ಟಿ 17 ರನ್ ಗಳಿಸಿ ಔಟಾದರು. ನಂತರ ನಾಯಕ ಹೋಪ್, ಶೆರ್ಫೇನ್ ರುದರ್ಫೋರ್ಡ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 45 ರನ್ ಸೇರಿಸಿದರು. ರುದರ್ಫೋರ್ಡ್ 40 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾದರು. ಇದರ ನಂತರ ಚೇಸ್, ಹೋಪ್ ಜೊತೆಗೆ ಐದನೇ ವಿಕೆಟ್‌ಗೆ 64 ರನ್ ಸೇರಿಸಿದರು. ಚೇಸ್ 29 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 36 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು.
ಆ ಬಳಿಕ ಜೊತೆಯಾದ ಜಸ್ಟಿನ್ ಗ್ರೀವ್ಸ್ ಹಾಗೂ ಹೋಪ್ ಏಳನೇ ವಿಕೆಟ್‌ಗೆ 110 ರನ್‌ಗಳ ಅಜೇಯ ಜೊತೆಯಾಟವನ್ನಾಡಿ ತಂಡವನ್ನು 294 ರನ್‌ಗಳತ್ತ ಕೊಂಡೊಯ್ದರು. ಈ ವೇಳೆ ಹೋಪ್ ತಮ್ಮ ಏಕದಿನ ವೃತ್ತಿಜೀವನದ 18 ನೇ ಶತಕವನ್ನು ಪೂರೈಸಿದರು. 94 ಎಸೆತಗಳಲ್ಲಿ 10 ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ ಅಜೇಯ 120 ರನ್ ಬಾರಿಸಿದರು. ಗ್ರೀವ್ಸ್ 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 43 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಪಾಕಿಸ್ತಾನ ಪರ ನಸೀಮ್ ಶಾ ಮತ್ತು ಅಬ್ರಾರ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರೆ, ಸ್ಯಾಮ್ ಅಯೂಬ್ ಮತ್ತು ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆದರು.
Asia Cup 2025: ‘ಗ್ಯಾರಂಟಿ ನೀಡಲು ಸಾಧ್ಯವಿಲ್ಲ’.. ಆದರೆ; ಏಷ್ಯಾಕಪ್ನಲ್ಲೂ ಭಾರತ- ಪಾಕ್ ಪಂದ್ಯ ರದ್ದು?
ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆಟಗಾರರ ಶೂನ್ಯ ಸಾಧನೆಯ ಆಘಾತ ಎದುರಾಯಿತು. ತಂಡದ ಅಗ್ರ ನಾಲ್ವರು ಆಟಗಾರರು ವಿಫಲರಾದರು. ಅಲ್ಲದೆ ತಂಡದ ಎಂಟು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಇದರಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದು ತಂಡವನ್ನು ಹೀನಾಯ ಸೋಲಿಗೆ ತಳ್ಳಿತು. ಅಂತಿಮವಾಗಿ ಪಾಕ್ ತಂಡ 29.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕರಾದ ಸ್ಯಾಮ್ ಅಯೂಬ್, ಅಬ್ದುಲ್ಲಾ ಶಫೀಕ್ ಮತ್ತು ನಾಯಕ ರಿಜ್ವಾನ್, ಹಸನ್ ಅಲಿ ಮತ್ತು ಅಬ್ರಾರ್ ಅಹ್ಮದ್ ಶೂನ್ಯಕ್ಕೆ ಔಟಾದರೆ, ಬಾಬರ್ ಆಝಂ ಕೇವಲ ಒಂಬತ್ತು ರನ್‌ಗಳಿಗೆ ಸುಸ್ತಾದರು. ಸಲ್ಮಾನ್ ಅಗಾ 30 ರನ್, ಹಸನ್ ನವಾಜ್ 13 ರನ್‌ಗಳು ಮತ್ತು ಮೊಹಮ್ಮದ್ ನವಾಜ್ ಅಜೇಯ 23 ರನ್ ಬಾರಿಸುವುದರೊಂದಿಗೆ ತಂಡವನ್ನು 90 ರನ್‌ಗಳ ಗಡಿ ದಾಟಿಸಿದರು. ವೆಸ್ಟ್ ಇಂಡೀಸ್ ಪರ, ಜೇಡನ್ ಸೀಲ್ಸ್ 7.2 ಓವರ್‌ಗಳಲ್ಲಿ 18 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಪಡೆದರೆ, ಮೋತಿ ಎರಡು ವಿಕೆಟ್, ಚೇಸ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ