- Kannada News Photo gallery Cricket photos Jaden Seals shatters Dale Steyn's record, West Indies wins ODI series
PAK vs WI: 0,0,9,0,6,0.. ಸೀಲ್ಸ್ ಸುನಾಮಿಗೆ ತತ್ತರಿಸಿದ ಪಾಕ್! 12 ವರ್ಷಗಳ ಹಳೆಯ ದಾಖಲೆ ಧ್ವಂಸ
West Indies vs Pakistan: ವೆಸ್ಟ್ ಇಂಡೀಸ್ ಪಾಕಿಸ್ತಾನವನ್ನು 202 ರನ್‌ಗಳಿಂದ ಸೋಲಿಸಿ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಜೇಡನ್ ಸೀಲ್ಸ್ ಅವರ ಅದ್ಭುತ ಬೌಲಿಂಗ್ (7.2 ಓವರ್‌ಗಳಲ್ಲಿ 6 ವಿಕೆಟ್‌ಗಳು, 18 ರನ್‌ಗಳು) ಮತ್ತು ಪಾಕಿಸ್ತಾನದ ಕಳಪೆ ಬ್ಯಾಟಿಂಗ್‌ನಿಂದಾಗಿ ಈ ಗೆಲುವು ಸಾಧ್ಯವಾಯಿತು. ಈ ಮೂಲಕ ಸೀಲ್ಸ್ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಅವರ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
Updated on: Aug 13, 2025 | 5:40 PM

ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಆತಿಥೇಯ ವೆಸ್ಟ್ ಇಂಡೀಸ್ 202 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ವಿಂಡೀಸ್ನ ಈ ಗೆಲುವಿನಲ್ಲಿ ಮಾರಕ ವೇಗಿ ಜೇಡನ್ ಸೀಲ್ಸ್ ಅವರ ಪಾತ್ರ ಪ್ರಮುಖವಾಗಿತ್ತು. ಸೀಲ್ಸ್ ಮಾರಕ ದಾಳಿಗೆ ಪಾಕ್ ತಂಡದ 6 ಆಟಗಾರರು ಕೇವಲ 15 ರನ್ಗಳಿಸಲಷ್ಟೇ ಶಕ್ತರಾದರು.

ಈ ಪಂದ್ಯದಲ್ಲಿ ಜೇಡೆನ್ ಸೀಲ್ಸ್ 7.2 ಓವರ್ ಬೌಲ್ ಮಾಡಿ ಕೇವಲ 18 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು. ಮೊದಲು ಸ್ಯಾಮ್ ಅಯೂಬ್ ಮತ್ತು ಅಬ್ದುಲ್ಲಾ ಶಫೀಕ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ಸೀಲ್ಸ್, ತಂಡದ ನಾಯಕ ಮೊಹಮ್ಮದ್ ರಿಜ್ವಾನ್ಗೂ ಖಾತೆ ತೆರೆಯಲು ಅವಕಾಶ ನೀಡಲಿಲ್ಲ.

ಸೀಲ್ಸ್ ದಾಳಿಗೆ ನಲುಗಿದ ಪಾಕ್ ತಂಡ ಕೇವಲ 8 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಮಾಜಿ ನಾಯಕ ಬಾಬರ್ ಆಝಂ ಮೇಲೆ ಒಂದೊಳ್ಳೆ ಇನ್ನಿಂಗ್ಸ್ನ ಜವಾಬ್ದಾರಿ ಇತ್ತು. ಆದರೆ ಸೀಲ್ಸ್ ಅಬ್ಬರದ ಮುಂದೆ ಬಾಬರ್ ಕೂಡ ಮಂಡಿಯೂರಿ 9 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು.

ಇಲ್ಲಿಗೆ ನಿಲ್ಲದ ಸೀಲ್ಸ್, ಕೆಳಕ್ರಮಾಂಕದ ಬ್ಯಾಟರ್ಗಳಾದ ನಸೀಮ್ ಶಾರನ್ನು 6 ರನ್‌ಗಳಿಗೆ ಪೆವಿಲಿಯನ್ಗೆ ಕಳುಹಿಸಿದರೆ, ಆ ಬಳಿಕ ಬಂದ ಹಸನ್ ಅಲಿ ಅವರನ್ನು ಸಹ ಶೂನ್ಯಕ್ಕೆ ಔಟ್ ಮಾಡಿ ತಮ್ಮ 6 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೇನ್ ಅವರ 12 ವರ್ಷಗಳ ಹಳೆಯ ದಾಖಲೆಯನ್ನು ಪುಡಿಗಟ್ಟಿದರು.

ಜೇಡನ್ ಸೀಲ್ಸ್ಗೂ ಮೊದಲು, ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಹೊಂದಿದ್ದರು. ಅವರು 2013 ರಲ್ಲಿ ಗ್ಕೆಬೆರ್ಹಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 39 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಈಗ 12 ವರ್ಷಗಳ ನಂತರ, ಜೇಡೆನ್ ಸೀಲ್ಸ್, ಸ್ಟೇನ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಸೀಲ್ಸ್ ಅವರ ಈ ಅಮೋಘ ಪ್ರದರ್ಶನದಿಂದಾಗಿ ಪಾಕ್ ತಂಡ ಕೇವಲ 92 ರನ್‌ಗಳಿಗೆ ಆಲೌಟ್ ಆಗುವ ಮೂಲಕ 202 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಮೂಲಕ 34 ವರ್ಷಗಳ ಸುದೀರ್ಘ ಅಂತರದ ನಂತರ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯನ್ನು ಗೆದ್ದ ಸಾಧನೆ ಮಾಡಿತು.

ಹಾಗೆಯೇ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನವನ್ನು 200 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಅಂತರದಿಂದ ಸೋಲಿಸಿದ್ದು ಇದೇ ಮೊದಲು. ಇದಕ್ಕೂ ಮೊದಲು 2015 ರ ಏಕದಿನ ವಿಶ್ವಕಪ್ನಲ್ಲಿ ವಿಂಡೀಸ್ ಪಡೆ ಪಾಕಿಸ್ತಾನವನ್ನು 150 ರನ್‌ಗಳಿಂದ ಸೋಲಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ವಾಸ್ತವವಾಗಿ ವಿಂಡೀಸ್ ಹಾಗೂ ಪಾಕ್ ನಡುವೆ 1975 ರಿಂದ ಏಕದಿನ ಸರಣಿಯನ್ನು ಆಡಲಾಗುತ್ತಿದೆ. ಆದರೆ ಮೊದಲ ಬಾರಿಗೆ ವಿಂಡೀಸ್ ತಂಡ ಪಾಕಿಸ್ತಾನ ವಿರುದ್ಧ ಇಷ್ಟು ದೊಡ್ಡ ಗೆಲುವು ದಾಖಲಿಸಿದೆ.
