ಗೆದ್ದರೂ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ ಕಳಪೆಯಾಟ..!

India vs New Zealand 1st: ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ 20 ಓವರ್‌ಗಳಲ್ಲಿ 190 ರನ್ ಗಳಿಸಿ 48 ರನ್ ಗಳಿಂದ ಸೋಲೊಪ್ಪಿಕೊಂಡಿದೆ.

ಗೆದ್ದರೂ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ ಕಳಪೆಯಾಟ..!
Team India

Updated on: Jan 22, 2026 | 9:54 AM

ಜನವರಿ 21, 2026 ರಂದು ನಡೆದ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 48 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಅದುವೇ ಕಳಪೆ ಫೀಲ್ಡಿಂಗ್. ಏಕೆಂದರೆ ಈ ಪಂದ್ಯದಲ್ಲಿ ಭಾರತೀಯ ಫೀಲ್ಡರ್​ಗಳು ಹಲವು ಅವಕಾಶಗಳನ್ನು ಕೈಚೆಲ್ಲಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಫೀಲ್ಡರ್​ಗಳು ಮಾಡಿದ ತಪ್ಪುಗಳಾವುವು ಎಂದು ನೋಡುವುದಾದರೆ,…

  • ಭಾರತೀಯ ಫೀಲ್ಡರ್‌ಗಳು ನ್ಯೂಝಿಲೆಂಡ್ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಮೂರು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟರು.
  • ಅರ್ಷದೀಪ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಇಶಾನ್ ಕಿಶನ್ ಸುಲಭ ಕ್ಯಾಚ್ ಕೈಚೆಲ್ಲಿದ್ದರು.
  •  ಮಾರ್ಕ್ ಚಾಪ್ಮನ್ ನೀಡಿದ ಸುಲಭ ಕ್ಯಾಚ್ ಹಿಡಿಯುವಲ್ಲಿ ರಿಂಕು ಸಿಂಗ್ ವಿಫಲರಾಗಿದ್ದರು.
  • ಅಕ್ಷರ್ ಪಟೇಲ್ ಕೂಡ ಗ್ಲೆನ್ ಫಿಲಿಪ್ಸ್ ನೀಡಿದ ಕ್ಯಾಚ್ ಕೈಚೆಲ್ಲಿದ್ದರು.

ಇದರ ಜೊತೆಗೆ ಸಂಜು ಸ್ಯಾಮ್ಸನ್ ಕಳಪೆ ವಿಕೆಟ್ ಕೀಪಿಂಗ್​ ಪ್ರದರ್ಶಿಸಿದ್ದಾರೆ. ಅದರಲ್ಲೂ ಅತ್ಯಂತ ಸುಲಭವಾಗಿ ಮಾಡಬಹುದಾಗಿದ್ದ ರನೌಟ್ ತಪ್ಪಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು.

  • ನ್ಯೂಝಿಲೆಂಡ್ ಇನಿಂಗ್ಸ್​ನ 10ನೇ ಓವರ್​ನಲ್ಲಿ ಗ್ಲೆನ್ ಫಿಲಿಪ್ಸ್ ಭರ್ಜರಿ ಹೊಡೆತ ಬಾರಿಸಿದ್ದರು. ಅತ್ತ ಬೌಂಡರಿಯಿಂದ ರಿಂಕು ಸಿಂಗ್ ವೇಗವಾಗಿ ಚೆಂಡನ್ನು ವಿಕೆಟ್ ಕೀಪರ್​ನತ್ತ ಎಸೆದಿದ್ದರು. ಈ ವೇಳೆ ಎರಡನೇ ರನ್​ಗಾಗಿ ಓಡುತ್ತಿದ್ದ ಗ್ಲೆನ್ ಫಿಲಿಪ್ಸ್ ಅವರನ್ನು ರನೌಟ್ ಮಾಡುವ ಅವಕಾಶ ಸಂಜು ಸ್ಯಾಮ್ಸನ್​ಗಿತ್ತು. ಆದರೆ ಚೆಂಡು ಹಿಡಿಯಲು ತಡಕಾಡುವ ಮೂಲಕ ಸ್ಯಾಮ್ಸನ್ ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ಕೈಚೆಲ್ಲಿಕೊಂಡರು.

ಹೀಗೆ ನಾಲ್ಕು ಅವಕಾಶಗಳನ್ನು ಕೈಚೆಲ್ಲಿದರ ಪರಿಣಾಯ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 190 ರನ್​ ಗಳಿಸಿತು. ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಈ ಕಳಪೆ ಪ್ರದರ್ಶನವು ಚಿಂತೆಗೆ ಕಾರಣವಾಗಿದೆ.

ಏಕೆಂದರೆ ಈ ಸರಣಿಯ ಬಳಿಕ ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನ ಒಂದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು 4 ಅವಕಾಶಗಳನ್ನು ಕೈಚೆಲ್ಲಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅಭಿಷೇಕ್ ಶರ್ಮಾ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್

ಒಟ್ಟಾರೆಯಾಗಿ, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೂ, ಫೀಲ್ಡಿಂಗ್‌ನಲ್ಲಿ ಮಾಡಿದ ತಪ್ಪುಗಳು ಭಾರತೀಯ ತಂಡಕ್ಕೆ ಮುಂದಿನ ಪಂದ್ಯಗಳಿಗೆ ಎಚ್ಚರಿಕೆಯ ಗಂಟೆಯಾಗಿವೆ.