IND vs ENG: ಟೀಮ್ ಇಂಡಿಯಾ ಎಷ್ಟು ರನ್​ಗಳಿಸಿ ಡಿಕ್ಲೇರ್ ಮಾಡಬೇಕು? ಇಲ್ಲಿದೆ ಮಾಹಿತಿ

England vs India, 1st Test: ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 471 ರನ್​ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ 465 ರನ್​ಗಳಿಸಿ ಆಲೌಟ್ ಆಗಿದೆ. ಇದೀಗ 6 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿದೆ.

IND vs ENG: ಟೀಮ್ ಇಂಡಿಯಾ ಎಷ್ಟು ರನ್​ಗಳಿಸಿ ಡಿಕ್ಲೇರ್ ಮಾಡಬೇಕು? ಇಲ್ಲಿದೆ ಮಾಹಿತಿ
Ind Vs Eng

Updated on: Jun 23, 2025 | 12:23 PM

ಭಾರತ ಮತ್ತು ಇಂಗ್ಲೆಂಡ್​ ನಡುವಣ ಮೊದಲ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ಮೂರು ದಿನದಾಟಗಳಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದೆ. ಹೀಗಾಗಿ ನಾಲ್ಕನೇ ದಿನದಾಟವು ನಿರ್ಣಾಯಕ. ಇತ್ತ ಮೂರನೇ ದಿನದಾಟದ ಕೊನೆಯ ಸೆಷನ್​ನಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 90 ರನ್​ಗಳಿಸಿದೆ.

ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (47) ಹಾಗೂ ಶುಭ್​​ಮನ್ ಗಿಲ್ (6) ಇನಿಂಗ್ಸ್ ಮುಂದುವರೆಸಲಿದ್ದಾರೆ. ಅಲ್ಲದೆ ಇಂದು ಭಾರತ ತಂಡವು ಸಂಪೂರ್ಣ ಬ್ಯಾಟಿಂಗ್ ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಅಂದರೆ 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿಲ್ಲ. ಏಕೆಂದರೆ ಹೆಡಿಂಗ್ಲೆ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್​ ಹೊಂದಿದ್ದು, ಇಲ್ಲಿ ಚೇಸಿಂಗ್ ಮಾಡುವುದು ಸುಲಭ. ಇದಕ್ಕೆ ಸಾಕ್ಷಿ ಈ ಹಿಂದಿನ ಅಂಕಿ ಅಂಶಗಳು.

ಯಶಸ್ವಿ ಚೇಸ್ ಯಾವುದು?

  • ಹೆಡಿಂಗ್ಲೆ ಮೈದಾನದಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದಿರುವುದು ಆಸ್ಟ್ರೇಲಿಯಾ ತಂಡ. 1948 ರಲ್ಲಿ ಇಂಗ್ಲೆಂಡ್ ವಿರುದ್ಧ 404 ರನ್​ಗಳ ಗುರಿಯನ್ನು ಬೆನ್ನತ್ತಿ ಆಸೀಸ್ ಪಡೆ ಜಯ ಸಾಧಿಸಿತ್ತು.
  • ಇದಾದ ಬಳಿಕ ಈ ಮೈದಾನದಲ್ಲಿ ಕಂಡು ಬಂದ ಅತ್ಯಂತ ಯಶಸ್ವಿ ಚೇಸಿಂಗ್ ಇಂಗ್ಲೆಂಡ್ ತಂಡದ್ದು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 359 ರನ್​ಗಳನ್ನು ಚೇಸ್ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿತ್ತು.
  • ಇದಲ್ಲದೆ ಇತ್ತೀಚಿನ ವರ್ಷಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೆ, 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ ನಾಲ್ಕನೇ ಇನಿಂಗ್ಸ್​ನಲ್ಲಿ 251 ರನ್​ ಬಾರಿಸಿ ಗೆಲುವು ದಾಖಲಿಸಿದೆ. ಹಾಗೆಯೇ 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ 296 ರನ್​ಗಳ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಗಿದೆ.

ಅಂದರೆ ಹೆಡಿಂಗ್ಲೆ ಮೈದಾನದಲ್ಲಿ ನಾಲ್ಕನೇ ಇನಿಂಗ್ಸ್​ನಲ್ಲಿ 250 ರಿಂದ 350 ರನ್​ಗಳಿಸುವುದು ಕಷ್ಟವೇನಲ್ಲ. ಹೀಗಾಗಿ ಭಾರತ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕನಿಷ್ಠ 400+ ಸ್ಕೋರ್​ಗಳಿಸದೇ ಡಿಕ್ಲೇರ್​ ಘೋಷಿಸುವ ಸಾಧ್ಯತೆಯಿಲ್ಲ.

ಈ ಮೂಲಕ ಇಂಗ್ಲೆಂಡ್​ಗೆ ತಂಡಕ್ಕೆ ಕೊನೆಯ ಇನಿಂಗ್ಸ್​ನಲ್ಲಿ ಕನಿಷ್ಠ 400+ ರನ್​ಗಳ ಗುರಿ ನೀಡಲು ಪ್ಲ್ಯಾನ್ ರೂಪಿಸಲಿದ್ದಾರೆ. ಒಂದು ವೇಳೆ ಟೀಮ್ ಇಂಡಿಯಾ 300ರ ಅಸುಪಾಸಿನಲ್ಲಿ ಆಲೌಟ್ ಆದರೆ, ಇಂಗ್ಲೆಂಡ್ ಚೇಸಿಂಗ್​ಗೆ ಪ್ರಯತ್ನಿಸುವುದು ಖಚಿತ.

ಏಕೆಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಆಕ್ರಮಣಕಾರಿ ರಣತಂತ್ರವನ್ನು ಅಳವಡಿಸಿಕೊಂಡಿರುವ ಇಂಗ್ಲೆಂಡ್ ತಂಡವು ಕಳೆದ ಕೆಲ ವರ್ಷಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದಕ್ಕಿಂತ ಮ್ಯಾಚ್ ಗೆಲ್ಲಲು ಪ್ರಯತ್ನಿಸುತ್ತಾ ಬಂದಿದೆ. ಈ ಪ್ರಯತ್ನವು ಹಲವು ಬಾರಿ ಆಂಗ್ಲರ ಕೈ ಹಿಡಿದಿದೆ. ಹೀಗಾಗಿ ಟೀಮ್ ಇಂಡಿಯಾ 300 ರನ್​ಗಳ ಅಸುಪಾಸಿನಲ್ಲಿ ರನ್​ಗಳಿಸಿದರೆ, ಇಂಗ್ಲೆಂಡ್ ಗೆಲುವಿನ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯುವುದು ಖಚಿತ.

ಇತ್ತ ಟೀಮ್ ಇಂಡಿಯಾ ಪರ ಮೊದಲ ಇನಿಂಗ್ಸ್​ನಲ್ಲಿ ಜಸ್​ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿದರೆ, ಉಳಿದ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ಪ್ರಸಿದ್ಧ್ ಕೃಷ್ಣ 20 ಓವರ್​ಗಳಲ್ಲಿ 128 ರನ್ ನೀಡಿದರೆ, ಮೊಹಮ್ಮದ್ ಸಿರಾಜ್ 27 ಓವರ್​ಗಳಲ್ಲಿ 122 ರನ್ ಬಿಟ್ಟು ಕೊಟ್ಟಿದ್ದರು. ಹೀಗಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಲು ಅಥವಾ ಗೆಲ್ಲಲು ಬಯಸಿದರೆ, ಕನಿಷ್ಠ 400 ರನ್​ಗಳನ್ನು ಕಲೆಹಾಕಲೇಬೇಕು.

ಇದನ್ನೂ ಓದಿ: MLC 2025: ದಾಖಲೆಯ ರನ್ ಚೇಸ್… ಹೊಸ ಚರಿತ್ರೆ ಬರೆದ ವಾಷಿಂಗ್ಟನ್ ಫ್ರೀಡಂ

ಹೆಡಿಂಗ್ಲೆ ಟೆಸ್ಟ್ ಪಂದ್ಯಗಳ ಯಶಸ್ವಿ ರನ್ ಚೇಸ್‌ಗಳು:

ಶ್ರೇಣಿ ತಂಡ ಗುರಿ ಸ್ಕೋರ್ ಓವರ್‌ಗಳು ರನ್ ರೇಟ್ ಎದುರಾಳಿ ವರ್ಷ
1 ಆಸ್ಟ್ರೇಲಿಯಾ 404 404/3 114.4 3.53 ಇಂಗ್ಲೆಂಡ್ 1948
2 ಇಂಗ್ಲೆಂಡ್ 359 362/9 125.4 2.88 ಆಸ್ಟ್ರೇಲಿಯಾ 2019
3 ವೆಸ್ಟ್ ಇಂಡೀಸ್ 322 322/5 91.2 3.52 ಇಂಗ್ಲೆಂಡ್ 2017
4 ಇಂಗ್ಲೆಂಡ್ 315 315/4 73.2 4.29 ಆಸ್ಟ್ರೇಲಿಯಾ 2001
5 ಇಂಗ್ಲೆಂಡ್ 296 296/3 54.2 5.44 ನ್ಯೂಝಿಲೆಂಡ್ 2022
6 ಇಂಗ್ಲೆಂಡ್ 251 254/7 50.0 5.08 ಆಸ್ಟ್ರೇಲಿಯಾ 2023
7 ಇಂಗ್ಲೆಂಡ್ 219 219/7 80.2 ೨.೭೨ ಪಾಕಿಸ್ತಾನ 1982
8 ಇಂಗ್ಲೆಂಡ್ 184 186/5 52.4 3.53 ಸೌತ್ ಆಫ್ರಿಕಾ 1929
9 ಪಾಕಿಸ್ತಾನ 180 180/7 50.4 3.55 ಆಸ್ಟ್ರೇಲಿಯಾ 2010
10 ವೆಸ್ಟ್ ಇಂಡೀಸ್ 128 131/2 32.3 4.03 ಇಂಗ್ಲೆಂಡ್ 1984