AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

India vs England Leeds Test: ಲೀಡ್ಸ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡ 471 ರನ್ ಗಳಿಸಿ ಮೊದಲ ಇನಿಂಗ್ಸ್ ಮುಗಿಸಿತು. ಇದೀಗ ಇಂಗ್ಲೆಂಡ್ ತಂಡ 465 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ 6 ರನ್ ಗಳ ಮುನ್ನಡೆ ಗಳಿಸಿದೆ. ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದರು. ಇಂಗ್ಲೆಂಡ್ ಇಷ್ಟು ರನ್ ಗಳಿಸುವ ನಿರೀಕ್ಷೆ ಇರಲಿಲ್ಲ ಆದರೆ ಭಾರತದ ತಪ್ಪುಗಳಿಂದಾಗಿ ಅವರಿಗೆ ಅನುಕೂಲವಾಯಿತು.

IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ
Ind Vs Eng
ಪೃಥ್ವಿಶಂಕರ
|

Updated on:Jun 22, 2025 | 8:43 PM

Share

ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 471 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದರೆ, ಇತ್ತ ಆತಿಥೇಯ ಇಂಗ್ಲೆಂಡ್‌ 465 ರನ್​ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್​ಗೆ ಅಂತ್ಯ ಹಾಡಿದೆ. ಈ ಮೂಲಕ ಭಾರತ ತಂಡಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್​ಗಳ ಮುನ್ನಡೆ ಸಿಕ್ಕಿದೆ. ವಾಸ್ತವವಾಗಿ ಇಂಗ್ಲೆಂಡ್‌ ಇಷ್ಟು ರನ್ ಬಾರಿಸುವ ಸಾಧ್ಯತೆಗಳಿರಲಿಲ್ಲ. ಆದರೆ ಟೀಂ ಇಂಡಿಯಾ ಮಾಡಿದ ತಪ್ಪುಗಳು ಇಂಗ್ಲೆಂಡ್‌ ತಂಡವನ್ನು ಈ ಬಲಿಷ್ಠ ಸ್ಥಿತಿಗೆ ತಂದಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ (Jasprit Bumrah) 5 ವಿಕೆಟ್​ಗಳ ಗೊಂಚಲು ಪಡೆದರು.

ಭಾರತಕ್ಕೆ ಉತ್ತಮ ಆರಂಭ

ಎರಡನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿದ್ದ ಇಂಗ್ಲೆಂಡ್‌ ತಂಡ ಇಲ್ಲಿಂದ ತನ್ನ ಮೂರನೇ ದಿನದಾಟವನ್ನು ಆರಂಭಿಸಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭದಲ್ಲೇ ಪ್ರಸಿದ್ಧ್ ಕೃಷ್ಣ, ಶತಕ ಬಾರಿಸಿದ್ದ ಓಲಿ ಪೋಪ್​ರನ್ನು ಔಟ್ ಮಾಡುವ ಮೂಲಕ ದಿನವನ್ನು ಉತ್ತಮವಾಗಿ ಆರಂಭಿಸಿದರು. ಆ ಬಳಿಕ ಬಂದ ನಾಯಕ ಬೆನ್ ಸ್ಟೋಕ್ಸ್, ಬ್ರೂಕ್ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಇವರಿಬ್ಬರ ನಡುವೆ 50 ರನ್​ಗಳ ಜೊತೆಯಾಟವೂ ಮೂಡಿತ್ತು. ಈ ವೇಳೆ ದಾಳಿಗಿಳಿದ ಸಿರಾಜ್, 20 ರನ್ ಬಾರಿಸಿದ್ದ ಸ್ಟೋಕ್ಸ್​ರನ್ನು ಪೆವಿಲಿಯನ್​ಗಟ್ಟುವ ಮೂಲಕ ಈ ಜೊತೆಯಾಟ ಮುರಿದರು.

99 ರನ್ ಬಾರಿಸಿದ ಬ್ರೂಕ್

ಸ್ಟೋಕ್ಸ್ ಬಳಿಕ ಬಂದ ಜೇಮಿ ಸ್ಮಿತ್ ಕೂಡ ಬ್ರೂಕ್ಸ್​ಗೆ ಉತ್ತಮ ಸಾಥ್ ನೀಡಿ 40 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 300 ರನ್​ಗಳ ಗಡಿ ದಾಟಿಸಿ ಪ್ರಸಿದ್ಧ್ ವಿಕೆಟ್ ಒಪ್ಪಿಸಿದರು. ಇದೇ ಹಂತದಲ್ಲಿ ಬ್ರೂಕ್​ಗೆ ಎರಡನೇ ಜೀವದಾನವೂ ಸಿಕ್ಕಿತು. 46 ರನ್​ಗಳಿದ್ದಾಗ ಸಿಕ್ಕ 2ನೇ ಜೀವದಾನವನ್ನು ಬಳಸಿಕೊಂಡ ಬ್ರೂಕ್ ಶತಕದತ್ತ ಸಾಗಿದರು. ಮತ್ತೊಮ್ಮೆ ಬ್ರೂಕ್​ಗೆ 82 ರನ್ ಗಳಿಸಿದ್ದಾಗ ಮೂರನೇ ಜೀವದಾನವೂ ಸಿಕ್ಕಿತು. ಆದರೆ ಈ ಜೀವದಾನವನ್ನು ಶತಕವಾಗಿ ಪೂರೈಸಲು ಬ್ರೂಕ್​ಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಬ್ರೂಕ್ 99 ರನ್ ಬಾರಿಸಿ ಕನ್ನಡಿಗ ಪ್ರಸಿದ್ಧ್​ಗೆ ವಿಕೆಟ್ ಒಪ್ಪಿಸಿದರು.

IND vs ENG: ಸೊನ್ನೆಗೆ ಜೀವದಾನ ನೀಡಿ 99 ರನ್​ಗಳ ದಂಡ ಕಟ್ಟಿದ ಟೀಂ ಇಂಡಿಯಾ

ಪ್ರಸಿದ್ಧ್​ಗೆ 3 ವಿಕೆಟ್

ಒಂದೆಡೆ ನಿಯಮಿತ ಅಂತರದಲ್ಲಿ ವಿಕೆಟ್ ಬೀಳುತ್ತಿದ್ದರೂ, ಹೊಡಿಬಡಿ ಆಟವನ್ನು ಮುಂದುವರೆಸಿದ ಇಂಗ್ಲೆಂಡ್‌ ಬಾಲಂಗೋಚಿಗಳು ತಂಡವನ್ನು 400 ರನ್​ಗಳ ಗಡಿ ದಾಟಿಸಿದರು. ಕೊನೆಯಲ್ಲಿ ವೋಕ್ಸ್ 38 ರನ್, ಕಾರ್ಸೆ 25 ರನ್ ಟಾಂಗ್ 11 ರನ್ ಬಾರಿಸಿ ತಂಡವನ್ನು 465 ರನ್​ಗಳಿಗೆ ಕೊಂಡೊಯ್ದರು. ಭಾರತದ ಪರ ಬುಮ್ರಾರನ್ನು ಹೊರತುಪಡಿಸಿ ಪ್ರಸಿದ್ಧ್​ 3 ವಿಕೆಟ್, ಸಿರಾಜ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sun, 22 June 25