
ವಿಜಯ ಹಝಾರೆ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ಗೆ ಮರಳಿದ್ದಾರೆ. ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದರೆ, ಜೈಪುರದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದ್ದರು. ವಿಶೇಷ ಎಂದರೆ ಈ ಇಬ್ಬರು ದಿಗ್ಗಜರು ಮೊದಲ ಮ್ಯಾಚ್ನಲ್ಲೇ ಶತಕ ಸಿಡಿಸಿದ್ದಾರೆ.
ಅಂದರೆ 15 ವರ್ಷಗಳ ಬಳಿಕ ದೇಶೀಯ ಏಕದಿನ ಪಂದ್ಯವಾಡಿದ ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿಯೊಂಧಿಗೆ ಅಬ್ಬರಿಸಿದ್ದಾರೆ. ಮತ್ತೊಂದೆಡೆ 7 ವರ್ಷಗಳ ಬಳಿಕ ವಿಜಯ ಹಝಾರೆ ಪಂದ್ಯವಾಡಿದ ರೋಹಿತ್ ಶರ್ಮಾ ಕೂಡ ಶತಕದೊಂದಿಗೆ ಮಿಂಚಿದ್ದಾರೆ. ಈ ಅಬ್ಬರದೊಂದಿಗೆ ಇಬ್ಬರು ದಿಗ್ಗಜರು ತಮ್ಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
ವಿಜಯ ಹಝಾರೆ ಟೂರ್ನಿಯ ಮೊದಲ ಮ್ಯಾಚ್ನಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಡಿಸೆಂಬರ್ 26 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಬಿಸಿಸಿಐ, ಟೀಮ್ ಇಂಡಿಯಾ ಆಟಗಾರರಿಗೆ ವಿಜಯ ಹಝಾರೆ ಟೂರ್ನಿಯಲ್ಲಿ ಕನಿಷ್ಠ 2 ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಶುಕ್ರವಾರ ನಡೆಯಲಿರುವ ದ್ವಿತೀಯ ಸುತ್ತಿನ ಪಂದ್ಯಗಳಲ್ಲೂ ರೋ-ಕೊ ಜೋಡಿ ಮತ್ತೆ ಕಣಕ್ಕಿಳಿಯಲಿದ್ದಾರೆ.
ಈ ಎರಡು ಮ್ಯಾಚ್ಗಳ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಜನವರಿ 11 ರಿಂದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿ ಶುರುವಾಗಲಿದ್ದು, ಅದಕ್ಕೂ ಮುನ್ನ ಸಂಪೂರ್ಣ ವಿಶ್ರಾಂತಿ ಪಡೆದು ಹಿಟ್ಮ್ಯಾನ್, ಕಿಂಗ್ ಕೊಹ್ಲಿ ಜೋಡಿ ಮತ್ತೆ ಅಭ್ಯಾಸಕ್ಕೆ ಮರಳುವ ಸಾಧ್ಯತೆಯಿದೆ.