IPL-2022 ರಲ್ಲಿ ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಪಂಜಾಬ್ ಕಿಂಗ್ಸ್ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಮತ್ತೊಂದೆಡೆ ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿಯನ್ನು ಎದುರು ನೋಡಬಹಹುದು. ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿದ ಎಸ್ಆರ್ಹೆಚ್ ತಂಡ ಬಲಿಷ್ಠ ಪುನರಾಗಮನ ಮಾಡಿದ್ದು, ಸತತ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಪಂಜಾಬ್ ಎದುರು ಈ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.
ಪಂಜಾಬ್ ಕಿಂಗ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ನೆಟ್ ರನ್ ರೇಟ್‌ನಲ್ಲಿ ಹಿಂದುಳಿದಿರುವ ಕಾರಣ ಏಳನೇ ಸ್ಥಾನದಲ್ಲಿದೆ. ಒಂದು ವೇಳೆ ಪಂಜಾಬ್ ಕಿಂಗ್ಸ್ ವಿರುದ್ದ ಎಸ್ಆರ್ಹೆಚ್ ಗೆದ್ದರೆ, ಅಂಕ ಪಟ್ಟಿಯಲ್ಲಿ ಮೇಲೇರಲಿದೆ. ಹೀಗಾಗಿ ಉಭಯ ತಂಡಗಳ ಟಾರ್ಗೆಟ್ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನ ಅಲಂಕರಿಸುವುದಾಗಿದೆ.
ಪಂಜಾಬ್ ಮತ್ತು ಸನ್‌ರೈಸರ್ಸ್ ನಡುವಿನ ಒಟ್ಟು ಪಂದ್ಯಗಳ ಅಂಕಿಅಂಶಗಳನ್ನು ನೋಡುವುದಾದರೆ, ಎಸ್ಆರ್ಹೆಚ್ ತಂಡವು ಮೇಲುಗೈ ಹೊಂದಿದೆ. ಏಕೆಂದರೆ ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 18 ಪಂದ್ಯಗಳು ನಡೆದಿವೆ. ಈ ಪೈಕಿ ಹೈದರಾಬಾದ್ 12 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ ಪಂಜಾಬ್ ಕಿಂಗ್ಸ್ ಕೇವಲ ಆರು ಪಂದ್ಯಗಳಲ್ಲಿ ಗೆದ್ದಿದೆ.
ಇನ್ನು ಕೊನೆಯ ಐದು ಪಂದ್ಯಗಳ ಅಂಕಿ-ಅಂಶಗಳನ್ನು ನೋಡಿದರೂ ಹೈದರಾಬಾದ್ ಮೇಲುಗೈ ಸಾಧಿಸಿದೆ. ಕಳೆದ ಐದು ಪಂದ್ಯಗಳಲ್ಲಿ ಹೈದರಾಬಾದ್ ಮೂರರಲ್ಲಿ ಗೆದ್ದಿದೆ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಎರಡರಲ್ಲಿ ಗೆದ್ದಿದೆ. ಇಲ್ಲಿ ಒಟ್ಟಾರೆ ಅಂಕಿ ಅಂಶಗಳನ್ನು ಪರಿಗಣಿಸಿದರೆ ಎಸ್ಆರ್ಹೆಚ್ ತಂಡವು ಮೇಲುಗೈ ಹೊಂದಿದೆ. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಮತ್ತೊಂದೆಡೆ ಹೈದರಾಬಾದ್ ತಂಡ ಕೂಡ ತನ್ನ ಲಯದಲ್ಲಿದೆ. ಹೀಗಾಗಿ ಎರಡೂ ತಂಡಗಳಿಂದ ಸಮಬಲದ ಹೋರಾಟ ಕಂಡು ಬರಲಿದೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್