ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ಚೆನ್ನೈ ಸೂಪರ್ ಕಿಂಗ್ಸ್ ತಂಡ (Royal Challengers Bangalore vs Chennai Super Kings) ಇಂದು ಐಪಿಎಲ್ 2021ರ (IPL ) 35ನೇ ಪಂದ್ಯದಲ್ಲಿ ಕಾದಾಡಲು ಸಜ್ಜಾಗಿದ್ದಾರೆ. ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ವಿರಾಟ್ ಕೊಹ್ಲಿ (Virat Kohli) ಹಾಗೂ ಎಂ. ಎಸ್ ಧೋನಿ (MS Dhoni) ನಡುವಣ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಮೇಲ್ನೋಟಕ್ಕೆ ಆರ್‌ಸಿಬಿ ಹಾಗೂ ಚೆನ್ನೈ (RCB vs CSK) ಎರಡೂ ತಂಡಗಳು ಈ ಪಂದ್ಯದ ನೆಚ್ಚಿನ ತಂಡವಾಗಿದೆ. ಭಾನುವಾರದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈಯನ್ನು ಮಣಿಸುವ ಮೂಲಕ ಧೋನಿ ಪಡೆ ಶುಭಾರಂಭ ಮಾಡಿದೆ. ಇತ್ತ ಆರ್‌ಸಿಬಿ ಈ ಬಾರಿ ಐಪಿಎಲ್‌ನ ಮೊದಲಭಾಗದಲ್ಲಿ ಬಲಿಷ್ಠ ಶಕ್ತಿಯಾಗಿ ಪುನರ್ ಸಂಘಟನೆಗೊಂಡಿದ್ದರೂ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಸೋತಿತ್ತು. ಹೀಗಾಗಿ ಕೊಹ್ಲಿ ಪಡೆ ಗೆಲುವಿನ ಲಯಕ್ಕೆ ಮರಳಬೇಕಿದೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ?, ಪಿಚ್ ವರದಿ ಏನಿದೆ? ಎಂಬ ಕುರಿತ ಮಾಹಿತಿ ಇಲ್ಲಿದೆ.
ಪಿಚ್ ಬಗ್ಗೆ ನೋಡುವುದಾದರೆ, ಶಾರ್ಜಾ ಕ್ರಿಕೆಟ್ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗ ಎಂದೇ ಹೇಳಬಹುದು. ಕ್ರೀಡಾಂಗಣದ ಬೌಂಡರಿ ಬಹಳಾ ಚಿಕ್ಕದಾಗಿದೆ. ಇದೇ ಕಾರಣಕ್ಕೆ ಐಪಿಎಲ್ 2020 ಟೂರ್ನಿ ವೇಳೆ ಇಲ್ಲಿ ರನ್ ಹೊಳೆಯೇ ಹರಿದಿತ್ತು. ಬೌಂಡರಿ-ಸಿಕ್ಸರ್‌ಗಳ ಸುರಿಮಳೆ ಸುರಿದಿತ್ತು. ಬ್ಯಾಟ್ಸ್‌ಮನ್‌ಗಳ ಬಲಿಷ್ಠ ಹೊಡೆತಗಳಿಂದ ಚೆಂಡು ಹಲವು ಬಾರಿ ಕ್ರೀಡಾಂಗಣದ ಆಚೆಗಿರುವ ಹೆದ್ದಾರಿಗೆ ಹೋಗಿ ಬಿದ್ದಿತ್ತು. ಹೀಗಾಗಿ ಆರ್‌ಸಿಬಿ-ಚೆನ್ನೈ ನಡುವಣ ಪಂದ್ಯದಲ್ಲೂ ಇಂಥದ್ದೇ ಹೈ ಸ್ಕೋರಿಂಗ್ ಗೇಮ್ ನಿರೀಕ್ಷಿಸಬಹುದಾಗಿದೆ. ಅಂದಹಾಗೆ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳ ಕೈಚಳಕ ನಡೆಯುವುದಿಲ್ಲ ಎಂಬುದು ಅನೇಕ ಬಾರಿ ಸಾಬೀತಾಗಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಟ್ಟು 56 ಟಿ-20 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿರುವುದು ಕೇವಲ 19 ಪಂದ್ಯಗಳನ್ನಷ್ಟೆ. ಎರಡನೇ ಬ್ಯಾಟಿಂಗ್ ಮಾಡಿದ ತಂಡ 36 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಕ್ರೀಡಾಂಗಣದಲ್ಲಿ ಕೊನೆಯ 12 ಐಪಿಎಲ್ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ 7 ಬಾರಿ ಗೆದ್ದರೆ, ಮೊದಲು ಬ್ಯಾಟ್ ಮಾಡಿದ ತಂಡ 5 ಬಾರಿ ಜಯ ಸಾಧಿಸಿದೆ.
ಲೆಕ್ಕಾಚಾರದ ಪ್ರಕಾರ ಇಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ ತಂಡ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಕ್ರಿಕ್ಟ್ರ್ಯಾಕರ್ ಹೇಳಿರುವ ಪ್ರಕಾರ, ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಚೆನ್ನೈ 170-190 ರನ್ ಬಾರಿಸುವ ಸಾಧ್ಯತೆ ಇದೆ. ಚೆನ್ನೈ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಆರ್‌ಸಿಬಿ 190-210 ರನ್ ಸಿಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 9 ಪಂದ್ಯಗಳಲ್ಲಿ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 17 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಫಲಿತಾಂಶವಿಲ್ಲದೆ 1 ಪಂದ್ಯ ಅಂತ್ಯಕಂಡಿದೆ.
RCB vs CSK Playing11: ಸಿಎಸ್ಕೆ ವಿರುದ್ಧ ಗೆಲ್ಲಲು ಕೊಹ್ಲಿ ಮಾಸ್ಟರ್ ಪ್ಲ್ಯಾನ್: ಆರ್ಸಿಬಿಯಲ್ಲಿ 2 ಬದಲಾವಣೆ ಖಚಿತ
Point Table IPL 2021: ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನಕ್ಕೆ ಕುಸಿದ ಮುಂಬೈ: ಇತರೆ ತಂಡಗಳು ಯಾವ ಸ್ಥಾನದಲ್ಲಿದೆ?
(Who will win todays IPL 2021 Match 35 Royal Challengers Bangalore RCB vs Chennai Super Kings CSK)