
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಮಹಿಳಾ ವಿಶ್ವಕಪ್ ಗೆಲ್ಲುವ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ನನಸು ಮಾಡಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 52 ರನ್ಗಳಿಂದ ಮಣಿಸಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಈ ವಿಶ್ವ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಹೊಳೆಯುವ ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಿದರು. ಆದರೆ ಈ ಟ್ರೋಫಿಯನ್ನು ಐಸಿಸಿ ಹಿಂತೆಗೆದುಕೊಳ್ಳಲಿದೆ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ.
ಐಸಿಸಿ ನಿಯಮದ ಪ್ರಕಾರ, ಚಾಂಪಿಯನ್ ತಂಡಕ್ಕೆ ನೀಡಲಾದ ಟ್ರೋಫಿಯನ್ನು ಫೋಟೊ ಶೂಟ್ ಬಳಿಕ ಹಿಂಪಡೆಯಲಾಗುತ್ತದೆ. ಅಲ್ಲದೆ ಬದಲಿಯಾಗಿ ಆ ಟ್ರೋಫಿಯ ಪ್ರತಿಕೃತಿಯನ್ನು ನೀಡಲಾಗುತ್ತದೆ. ಅಂದರೆ ನಕಲಿ ಟ್ರೋಫಿಯನ್ನು ಹಸ್ತಾಂತರಿಸಲಾಗುತ್ತದೆ.
ಐಸಿಸಿ ಇಂತಹದೊಂದು ನಿಯಮ ರೂಪಿಸಿರುವುದು 26 ವರ್ಷಗಳ ಹಿಂದೆ. ಈ ನಿಯಮದ ಪ್ರಕಾರ, ಯಾವುದೇ ತಂಡಕ್ಕೆ ಮೂಲ ಟ್ರೋಫಿಯನ್ನು ನೀಡಲಾಗುವುದಿಲ್ಲ. ಬದಲಾಗಿ ಅದನ್ನೇ ಹೋಲುವ ಮತ್ತೊಂದು ಡಮ್ಮಿ ಟ್ರೋಫಿ ನೀಡಲಾಗುತ್ತದೆ.
ಚಾಂಪಿಯನ್ ತಂಡಕ್ಕೆ ಹಸ್ತಾಂತರಿಸಿದ ಮೂಲ ಟ್ರೋಫಿಯನ್ನು ಹಿಂಪಡೆದ ಬಳಿಕ ಅದನ್ನು ದುಬೈನಲ್ಲಿರುವ ಐಸಿಸಿ ಕಚೇರಿಯಲ್ಲಿ ಇರಿಸಲಾಗುತ್ತದೆ. ಅಲ್ಲದೆ ಮುಂದಿನ ಏಕದಿನ ವಿಶ್ವಕಪ್ವರೆಗೂ ಮೂಲ ಟ್ರೋಫಿ ಐಸಿಸಿ ಕಚೇರಿಯಲ್ಲೇ ಇರಲಿದೆ.
ಐಸಿಸಿ ಟ್ರೋಫಿಯನ್ನು ಹಿಂಪಡೆಯುವ ನಿಯಮವನ್ನು ಜಾರಿಗೊಳಿಸಿರುವುದು ಮೂಲ ಟ್ರೋಫಿಯ ಕಳ್ಳತನ ಅಥವಾ ಹಾನಿಯನ್ನು ತಡೆಯಲು. ಅಂದರೆ ಐಸಿಸಿ ಆಯೋಜಿಸುವ ಟೂರ್ನಿಗಳಿಗೆ ಒಂದೊಂದು ಟ್ರೋಫಿಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಈ ಒರಿಜಿನಲ್ ಟ್ರೋಫಿಗಳಿಗೆ ಹಾನಿಯಾಗುವುದನ್ನು ತಡೆಯಲು ಐಸಿಸಿ ಮೂಲ ಟ್ರೋಫಿಯನ್ನು ಹಿಂಪಡೆಯುತ್ತಿದೆ. ಬದಲಾಗಿ ಅದನ್ನೇ ಹೋಲುವ ಡಮ್ಮಿ ಟ್ರೋಫಿಯನ್ನು ನೀಡಲಾಗುತ್ತದೆ.
ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯು ಸರಿಸುಮಾರು 11 ಕೆಜಿ ತೂಕವಿದ್ದು, ಸುಮಾರು 60 ಸೆಂ.ಮೀ ಎತ್ತರವಿದೆ. ಇದು ಸ್ಟಂಪ್‌ಗಳು ಮತ್ತು ಬೇಲ್‌ಗಳಂತಹ ಆಕಾರದ ಮೂರು ಬೆಳ್ಳಿ ಸ್ತಂಭಗಳನ್ನು ಹೊಂದಿದೆ. ಅಲ್ಲದೆ ಅದರ ಮೇಲೆ ಚಿನ್ನದ ಗ್ಲೋಬ್ ಅನ್ನು ಇರಿಸಲಾಗಿದೆ.
ಇದನ್ನೂ ಓದಿ: AUS vs IND: ಆಸ್ಟ್ರೇಲಿಯಾ ತಂಡದಿಂದ ಮೂವರು ರಿಲೀಸ್..!
ಇನ್ನು ಟ್ರೋಫಿಯ ಮೇಲೆ ಎಲ್ಲಾ ವಿಜೇತ ತಂಡಗಳ ಹೆಸರುಗಳನ್ನು ಕೆತ್ತಲಾಗಿದೆ. ಕಳೆದ 13 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ (7), ಇಂಗ್ಲೆಂಡ್ (4), ನ್ಯೂಝಿಲೆಂಡ್ (1) ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದವು. ಇದೀಗ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಟ್ರೋಫಿ ಮೇಲೆ ತನ್ನ ಹೆಸರು ಕೂಡ ಹಚ್ಚಾಗುವಂತೆ ಮಾಡಿದೆ.
Published On - 1:55 pm, Tue, 4 November 25