ಕ್ರಿಕೆಟ್ ಅಂಗಳದ ಸಂಭ್ರಮಕ್ಕೆ ಹೊಸ ಅರ್ಥ ನೀಡುವಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಸದಾ ಮುಂದು. ಒಂದು ಸಮಯದಲ್ಲಿ ಇಡೀ ವಿಂಡೀಸ್ ತಂಡವು ಗಗ್ನಾಮ್ ಸ್ಟೈಲ್ ಡ್ಯಾನ್ಸ್ ಮೂಲಕ ಮೈದಾನದಲ್ಲಿ ಸಂಚಲನ ಸೃಷ್ಟಿಸಿದ್ದರು. ಇನ್ನು ಬ್ರಾವೊ, ಪೊಲಾರ್ಡ್ ಸೇರಿದಂತೆ ಕೆಲ ಆಟಗಾರರು ಕೂಡ ವಿಭಿನ್ನವಾಗಿ ಸಂಭ್ರಮಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಇದರ ಮುಂದುವರೆದ ಭಾಗವಾಗಿ ಇದೀಗ ವಿಂಡೀಸ್ ತಂಡದ ಇಬ್ಬರು ಯುವ ಆಟಗಾರರು ಹೊಸ ಸ್ಟೈಲ್ನಲ್ಲಿ ಸಂಭ್ರಮಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ವಿಶೇಷ ಎಂದರೆ ಇಲ್ಲಿ ಒಬ್ಬರು ಸಖತ್ ಸ್ಟಂಟ್ ಮೂಲಕ ಸಂಭ್ರಮಿಸಿ ಮೂಕವಿಸ್ಮಿತರನ್ನಾಗಿಸಿದರೆ, ಮತ್ತೊಬ್ಬರು ಬೆನ್ನು ನೋವಿನ ಸೆಲೆಬ್ರೇಷನ್ ಮಾಡಿ ಎಲ್ಲರನ್ನು ನಗಿಸಿದ್ದಾರೆ.
ಬುಧವಾರ ಬಾರ್ಬಡೋಸ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆದ ಯುವ ಸ್ಪಿನ್ನರ್ ಅಕಿಲ್ ಹೊಸೈನ್ ಅಜ್ಜನಂತೆ ಬೆನ್ನನ್ನು ಹಿಡಿದುಕೊಂಡು ನಡೆದು ಸಂಭ್ರಮಿಸುವ ಮೂಲಕ ಗಮನ ಸೆಳೆದರು. ಮತ್ತೊಂದೆಡೆ ಯುವ ಬೌಲರ್ ಕೆವಿನ್ ಸಿಂಕ್ಲೇರ್ ಕೂಡ ತಮ್ಮದೇ ಶೈಲಿಯಲ್ಲಿ ಪಲ್ಟಿ ಹೊಡೆದು ಸಂಭ್ರಮಿಸಿದರು.
ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಅಗ್ರ ಕ್ರಮಾಂಕವನ್ನು ಪೆವಿಲಿಯನ್‌ಗೆ ತರುವಲ್ಲಿ ಅಕಿಲ್ ಹೊಸೈನ್ ಪ್ರಮುಖ ಪಾತ್ರ ವಹಿಸಿದರು. ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿ 28 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ದರು. ಈ 3 ವಿಕೆಟ್‌ಗಳಲ್ಲಿ ಡೆವೊನ್ ಕಾನ್ವೆ ಅವರ ವಿಕೆಟ್‌ಗಳು ಮುಖ್ಯವಾಗಿದ್ದವು. ಈ ವಿಕೆಟ್ ಸಿಗುತ್ತಿದ್ದಂತೆ ಹುಸೇನ್ ಮೈದಾದನದಲ್ಲಿ ತಾತನಂತೆ ನಡೆದುಕೊಂಡು ಸಂಭ್ರಮಿಸಿದರು.
ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದ ಕೆವಿನ್ ಸಿಂಕ್ಲೇರ್ ಟಾಮ್ ಲ್ಯಾಥಮ್ ವಿಕೆಟ್ ಪಡೆದು, ಗಾಳಿಯಲ್ಲಿ ಪಲ್ಟಿ ಹೊಡೆಯುವ ಮೂಲಕ ಚೊಚ್ಚಲ ವಿಕೆಟ್ ಅನ್ನು ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಕೇವಲ 190 ರನ್ಗಳಿಗೆ ಆಲೌಟ್ ಆಯಿತು. ಈ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 39 ಓವರ್ಗಳಲ್ಲಿ 193 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.