ಬ್ಯಾಟಿಂಗ್‌ನಲ್ಲಿ ಶತಕ, ಬೌಲಿಂಗ್‌ನಲ್ಲಿ 7 ವಿಕೆಟ್; ಮುಲ್ಡರ್ ಹೆಸರಿನಲ್ಲಿ ವಿಶ್ವ ದಾಖಲೆ

ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 219 ರನ್‌ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ವಿಯಾನ್ ಮುಲ್ಡರ್ ಈ ಗೆಲುವಿನ ರೂವಾರಿ. ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿ, ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ತ್ರಿಶತಕ ಮತ್ತು 7 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬ್ಯಾಟಿಂಗ್‌ನಲ್ಲಿ ಶತಕ, ಬೌಲಿಂಗ್‌ನಲ್ಲಿ 7 ವಿಕೆಟ್; ಮುಲ್ಡರ್ ಹೆಸರಿನಲ್ಲಿ ವಿಶ್ವ ದಾಖಲೆ
Wiaan Mulder

Updated on: Nov 25, 2026 | 8:50 PM

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಕೇವಲ ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಹಾಗೂ 219 ರನ್‌ಗಳ ಭರ್ಜರಿ ಗೆಲುವು ದಾಖಲಿಸಿರುವ ಹರಿಣಗಳ ಪಡೆ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಭರ್ಜರಿ ಗೆಲುವಿನಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಸಿಡಿಸಿದ್ದ ಮುಲ್ಡರ್, ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 7 ವಿಕೆಟ್ ಕಬಳಿಸಿ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದಿದ್ದಾರೆ. ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 8 ವಿಕೆಟ್ ಪಡೆದಿರುವ ಅವರು, ತಮ್ಮ ಹೆಸರಿನಲ್ಲಿ ಹೊಸ ವಿಶ್ವ ದಾಖಲೆಯನ್ನೂ ಬರೆದಿದ್ದಾರೆ.

ಮುಲ್ಡರ್ ಆಲ್‌ರೌಂಡ್ ಪ್ರದರ್ಶನ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಮುಲ್ಡರ್ ಒಂದು ವಿಕೆಟ್ ಪಡೆದರು. ಬಳಿಕ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಪರ ಮಾರ್ಕಸ್ ಅಕರ್ಮನ್ ಹಾಗೂ ವಿಯಾನ್ ಮುಲ್ಡರ್ ಭರ್ಜರಿ ಶತಕ ಸಿಡಿಸಿದರು. ಇವರಿಬ್ಬರ ನೆರವಿನಿಂದ ಹರಿಣಗಳ ಪಡೆ 494 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

Loading...

ಇದರೊಂದಿಗೆ ದಕ್ಷಿಣ ಆಫ್ರಿಕಾ ಬರೋಬ್ಬರಿ 403 ರನ್‌ಗಳ ಮುನ್ನಡೆ ಗಳಿಸಿತು. ಈ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಗೆ ತತ್ತರಿಸಿ ಕೇವಲ 184 ರನ್‌ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ ವಿಯಾನ್ ಮುಲ್ಡರ್ ಅಕ್ಷರಶಃ ಅಬ್ಬರಿಸಿದರು. 11 ಓವರ್‌ಗಳಲ್ಲಿ 3 ಮೇಡನ್ ಸಹಿತ ಕೇವಲ 31 ರನ್ ನೀಡಿ 7 ವಿಕೆಟ್ ಕಬಳಿಸಿದರು. ಈ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ದಾಖಲಿಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಹೊಸ ದಾಖಲೆ; ಶ್ರೀನಾಥ್ ಹಿಂದಿಕ್ಕಿ ಟಾಪ್-10ಗೆ ಎಂಟ್ರಿ

ಮುಲ್ಡರ್ ಹೆಸರಿನಲ್ಲಿ ಅಪರೂಪದ ವಿಶ್ವ ದಾಖಲೆ

ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ 7 ವಿಕೆಟ್ ಕಬಳಿಸುವ ಮೂಲಕ ವಿಯಾನ್ ಮುಲ್ಡರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ಸಾಧನೆ ಮಾಡಿದ್ದಾರೆ. ಟೆಸ್ಟ್ ವೃತ್ತಿಜೀವನದಲ್ಲಿ ತ್ರಿಶತಕ ಸಿಡಿಸುವುದರ ಜೊತೆಗೆ, ಒಂದು ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಮುಲ್ಡರ್ ಪಾತ್ರರಾಗಿದ್ದಾರೆ. 2025ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅಜೇಯ 367 ರನ್ ಸಿಡಿಸುವ ಮೂಲಕ ಮುಲ್ಡರ್ ತಮ್ಮ ವೃತ್ತಿಜೀವನದ ಮೊದಲ ತ್ರಿಶತಕ ದಾಖಲಿಸಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಕಬಳಿಸುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
Loading...
Unable to load recommendations.
Follow Us