
2026 ರ ಮಹಿಳಾ ಟಿ20 ಏಷ್ಯಾಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಿದ್ದ ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸುವ ಮೂಲಕ ಅಜೇಯ ತಂಡವಾಗಿ ಫೈನಲ್‌ಗೆ ಪ್ರವೇಶಿಸಿದೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 149 ರನ್ ಕಲೆಹಾಕಿತು. ತಂಡದ ಪರ ಶಫಾಲಿ ವರ್ಮಾ 64 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ, ಟೀಂ ಇಂಡಿಯಾದ ಬೌಲಿಂಗ್ ಮುಂದೆ ಸಂಪೂರ್ಣವಾಗಿ ಶರಣಾಗಿ 20 ಓವರ್‌ಗಳಲ್ಲಿ 109 ರನ್ ಬಾರಿಸಲಷ್ಟೇ ಶಕ್ತವಾಗಿ 40 ರನ್ಗಳಿಂದ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸ್ಮೃತಿ ಮಂಧಾನ ಕೇವಲ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಬರೋಬ್ಬರಿ 4 ಜೀವದಾನಗಳ ಲಾಭ ಪಡೆದ ಶಫಾಲಿ ವರ್ಮಾ 40 ಎಸೆತಗಳಲ್ಲಿ 64 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. 160.00 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಶೆಫಾಲಿ ತಂಡವನ್ನು ಶತಕದ ಸನಿಹಕ್ಕೆ ತಂದರು. ಶೆಫಾಲಿ ಜೊತೆ ಪ್ರತಿಕಾ ರಾವಲ್ ಕೂಡ 24 ಎಸೆತಗಳಲ್ಲಿ 20 ರನ್‌ಗಳ ಕಾಣಿಕೆ ನೀಡಿದರು. ನಂತರ ರಿಚಾ ಘೋಷ್ 16 ಎಸೆತಗಳಲ್ಲಿ ಎರಡು ಸಿಕ್ಸರ್ ಸೇರಿದಂತೆ 21 ರನ್ ಬಾರಿಸಿದರೆ, ದೀಪ್ತಿ ಶರ್ಮಾ 6 ಎಸೆತಗಳಲ್ಲಿ 13 ರನ್ ಕಲೆಹಾಕಿದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ 28 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 24 ರನ್ ಗಳಿಸಿ ಅಜೇಯರಾಗುಳಿದರು. ಭಾರತಿ ಫುಲ್ಮಾಲಿ ಒಂದೇ ಎಸೆತಕ್ಕೆ ಔಟಾದರು. ಇತ್ತ ಬಾಂಗ್ಲಾದೇಶ ಪರ ಸುಲ್ತಾನಾ ಖಾತುನ್ 3 ಓವರ್‌ಗಳಲ್ಲಿ 30 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರೆ, ಮರುಫಾ ಅಖ್ತರ್ 4 ಓವರ್‌ಗಳಲ್ಲಿ 40 ರನ್‌ಗಳಿಗೆ ಒಂದು ವಿಕೆಟ್, ನಹಿದಾ ಅಖ್ತರ್ 4 ಓವರ್‌ಗಳಲ್ಲಿ 25 ರನ್‌ಗಳಿಗೆ ಒಂದು ವಿಕೆಟ್ ಮತ್ತು ರಬೇಯಾ ಖಾನ್ 4 ಓವರ್‌ಗಳಲ್ಲಿ 22 ರನ್‌ಗಳಿಗೆ ಒಂದು ವಿಕೆಟ್ ಪಡೆದರು.
150 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಜುವೈರಿಯಾ ಫಿರ್ದೋಸ್ 14 ರನ್‌ಗಳಿಗೆ ಸುಸ್ತಾದರೆ, 1 ಜೀವದಾನದ ಹೊರತಾಗಿಯೂ ದಿಲಾರಾ ಅಖ್ತರ್ 21 ರನ್ ಬಾರಿಸಲಷ್ಟೇ ಶಕ್ತರಾದರು. ಸೋಭಾನಾ ಮೊಸ್ತರಿ 18 ರನ್ಗೆ ವಿಕೆಟ್ ಒಪ್ಪಿಸಿದರೆ, ನಾಯಕಿ ನಿಗರ್ ಸುಲ್ತಾನಾ ಅವರ ಇನ್ನಿಂಗ್ಸ್ ಕೂಡ 19 ರನ್‌ಗಳಿಗೆ ಅಂತ್ಯವಾಯಿತು. ಬಾಂಗ್ಲಾ ತಂಡದ ಅಗ್ರ ಐವರು ಆಟಗಾರ್ತಿಯರು ಎರಡಂಕಿ ಮೊತ್ತ ದಾಟಿದರಾದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ಎಡವಿದರು. ಇದರ ಪರಿಣಾಮವಾಗಿ ಟೀಂ ಇಂಡಿಯಾಕ್ಕೆ ಗೆಲುವು ಧಕ್ಕಿತು. ಭಾರತದ ಪರ ದೀಪ್ತಿ ಶರ್ಮಾ ಅತ್ಯಧಿಕ 3 ವಿಕೆಟ್ ಪಡೆದರು.
Published On - 11:09 pm, Thu, 10 September 26