Women’s Asia Cup 2024: ಹ್ಯಾಟ್ರಿಕ್ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಭಾರತ

Women’s Asia Cup 2024: ಶ್ರೀಲಂಕಾದ ರಂಗಿ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಷ್ಯಾಕಪ್ 2024 ರ 10 ನೇ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನೇಪಾಳ ತಂಡವನ್ನು ರನ್​​ಗಳಿಂದ ಮಣಿಸಿ ಅಜೇಯ ತಂಡವಾಗಿ ಸೆಮಿಫೈನಲ್‌ ಸುತ್ತಿಗೆ ಎಂಟ್ರಿಕೊಟ್ಟಿದೆ.

Women’s Asia Cup 2024: ಹ್ಯಾಟ್ರಿಕ್ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಭಾರತ
ಭಾರತ ವನಿತಾ ಪಡೆ
Follow us
ಪೃಥ್ವಿಶಂಕರ
|

Updated on:Jul 23, 2024 | 10:30 PM

ಶ್ರೀಲಂಕಾದ ರಂಗಿ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಷ್ಯಾಕಪ್ 2024 ರ 10 ನೇ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನೇಪಾಳ ತಂಡವನ್ನು 82 ರನ್​​ಗಳಿಂದ ಮಣಿಸಿ ಅಜೇಯ ತಂಡವಾಗಿ ಸೆಮಿಫೈನಲ್‌ ಸುತ್ತಿಗೆ ಎಂಟ್ರಿಕೊಟ್ಟಿದೆ. ಲೀಗ್ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಪಾಕಿಸ್ತಾನ ಕೂಡ ಗುಂಪಿನಲ್ಲಿ ಎರಡನೇ ತಂಡವಾಗಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.

ಶಫಾಲಿ ಸ್ಫೋಟಕ ಬ್ಯಾಟಿಂಗ್

ಈ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 178 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಶೆಫಾಲಿ ವರ್ಮಾ 48 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 81 ರನ್ ಗಳಿಸಿದರು. ಈ ಪಂದ್ಯದಲ್ಲಿ ದಯಾಲನ್ ಹೇಮಲತಾ ಅವರು ಶೆಫಾಲಿ ವರ್ಮಾ ಜೊತೆಗೂಡಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ ಅಜೇಯ 28 ರನ್‌ಗಳ ಕೊಡುಗೆ ನೀಡಿದರು.

ನೇಪಾಳದ ಬ್ಯಾಟಿಂಗ್ ವಿಫಲ

ಬೌಲಿಂಗ್ ಬಳಿಕ ನೇಪಾಳ ತಂಡ ಬ್ಯಾಟಿಂಗ್‌ನಲ್ಲೂ ಸೋತು ಸುಣ್ಣವಾಯಿತು. 179 ರನ್‌ಗಳ ಗುರಿಗೆ ಉತ್ತರವಾಗಿ ನೇಪಾಳ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 96 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಬೌಲಿಂಗ್​ನಲ್ಲಿ ಕಮಾಲ್ ಮಾಡಿದ ದೀಪ್ತಿ ಶರ್ಮಾ 4 ಓವರ್​ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಪಡೆದರು.

ಸೆಮಿಫೈನಲ್​ಗೆ ಭಾರತ-ಪಾಕಿಸ್ತಾನ

ವಾಸ್ತವವಾಗಿ, ಭಾರತ, ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳು ಒಂದೇ ಗುಂಪಿನಲ್ಲಿದ್ದವು. ಇದರಲ್ಲಿ ಟೀಂ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಪಾಕಿಸ್ತಾನ ತಂಡ 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು ಭಾರತದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಮೂಲಕ 4 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅದೇ ಸಮಯದಲ್ಲಿ, ನೇಪಾಳ ಮೂರು ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಯುಎಇ ತಂಡ ಎಲ್ಲಾ ಮೂರು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಹೀಗಾಗಿ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿರುವ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್​ಗೆ ಲಗ್ಗೆ ಇಟ್ಟರೆ, ನೇಪಾಳ ಮತ್ತ ಯುಎಇ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Tue, 23 July 24