
ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ 2025 ರ ಮಹಿಳಾ ಏಕದಿನ ವಿಶ್ವಕಪ್‌ನ (Women’s World Cup 2025) ಎರಡನೇ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾವನ್ನು (New Zealand Women Vs Australia Women ) ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 326 ರನ್ ಕಲೆಹಾಕಿತು. ತಂಡದ ಪರ ಆಶ್ಲೀ ಗಾರ್ಡ್ನರ್ ಭರ್ಜರಿ ಶತಕ ಬಾರಿಸಿದರು. ಈ ಗುರಿ ಬೆನ್ನಟ್ಟಿದ ಕಿವೀಸ್ ತಂಡವು ಕಳಪೆ ಆರಂಭವನ್ನು ಪಡೆಯಿತು. ಖಾತೆ ತೆರೆಯದೆಯೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ನಾಯಕಿ ಸೋಫಿ ಡಿವೈನ್ ಸ್ಮರಣೀಯ ಶತಕ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ವಿಫಲರಾದರು.
ಸೋಫಿ ಡಿವೈನ್ ಕ್ರೀಸ್‌ಗೆ ಬಂದಾಗ ತಂಡವು ಆರಂಭಿಕ ಆಘಾತದಲ್ಲಿತ್ತು. ಆದಾಗ್ಯೂ ಆರಂಭದಲ್ಲಿ ನಿದಾನಗತಿಯ ಬ್ಯಾಟಿಂಗ್ ಮಾಡಿದ ಸೋಫಿ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾದರು. ಪರಿಣಾಮವಾಗಿ ತಮ್ಮ ಅರ್ಧಶತಕವನ್ನು ಪೂರೈಸಲು 69 ಎಸೆತಗಳನ್ನು ತೆಗೆದುಕೊಂಡರು, ಇದರಲ್ಲಿ ಐದು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸೇರಿದ್ದವು. ನಂತರ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ಸೋಫಿ 107 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಒಟ್ಟು 112 ಎಸೆತಗಳನ್ನು ಎದುರಿಸಿ 111 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 12 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು.
ಅದರಲ್ಲೂ ಇನ್ನಿಂಗ್ಸ್‌ನ 36 ನೇ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಶತಕ ಪೂರೈಸಿದ ಸೋಫಿ ಡಿವೈನ್ ಅವರಿಗೆ ಇದು ಅವರ ಒಂಬತ್ತನೇ ಏಕದಿನ ಶತಕ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ನೇ ಶತಕವಾಗಿದೆ. ಈ ಪಂದ್ಯಾವಳಿ ಸೋಫಿ ಡಿವೈನ್‌ಗೆ ಬಹಳ ವಿಶೇಷವಾಗಿದೆ. ಕೆಲವೇ ತಿಂಗಳುಗಳ ಹಿಂದೆ, ಅವರು ವಿಶ್ವಕಪ್ ನಂತರ ಏಕದಿನ ಸ್ವರೂಪದಿಂದ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ. ಇದೀಗ ಶತಕದೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸುವ ಮೂಲಕ, ಅದನ್ನು ಇನ್ನಷ್ಟು ವಿಶೇಷವಾಗಿಸುವ ತಮ್ಮ ಬದ್ಧತೆಯನ್ನು ಅವರು ಪ್ರದರ್ಶಿಸಿದ್ದಾರೆ.
ಮಹಿಳಾ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೂರನೇ ಅತ್ಯಂತ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸೋಫಿ ಡಿವೈನ್ ಪಾತ್ರರಾಗಿದ್ದಾರೆ. 36 ವರ್ಷ 30 ದಿನಗಳಲ್ಲಿ ಸೋಫಿ ತಮ್ಮ ಶತಕ ಪೂರೈಸಿದರೆ, ಅವರಿಗಿಂತ ಮೊದಲು 1997 ರಲ್ಲಿ ಅಂದರೆ 28 ವರ್ಷಗಳ ಹಿಂದೆ, ಜಾನೆಟ್ ಬ್ರಿಟನ್ 38 ವರ್ಷ 161 ದಿನಗಳಲ್ಲಿ ಶತಕ ಬಾರಿಸಿದ್ದರು. ಹಾಗೆಯೇ ಬಾರ್ಬ್ ಬೇಬ್ಸ್ 39 ವರ್ಷ 48 ದಿನಗಳಲ್ಲಿ ಈ ಸಾಧನೆ ಮಾಡುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
IND W vs PAK W: ಪಾಕಿಸ್ತಾನ ನಮ್ಮ ಶತ್ರು.. ಶೇಕ್ಹ್ಯಾಂಡ್ ಮಾಡದಂತೆ ವನಿತಾ ತಂಡಕ್ಕೂ ಬಿಸಿಸಿಐ ಸಂದೇಶ
ಸೋಫಿ ಡಿವೈನ್ ನಾಯಕಿಯ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರೂ, ಅವರಿಗೆ ಇತರ ಬ್ಯಾಟ್ಸ್‌ಮನ್‌ಗಳ ಬೆಂಬಲ ಸಿಗದ ಕಾರಣ ನ್ಯೂಜಿಲೆಂಡ್ ಸೋಲಿಗೆ ಕೊರಳೊಡ್ಡಬೇಕಾಯಿತು. 327 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 237 ರನ್‌ಗಳಿಗೆ ಆಲೌಟ್ ಆಗಿ ಸೋಲಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Wed, 1 October 25