ನಾನು ತಪ್ಪೇ ಮಾಡಿಲ್ಲ, ಕಪ್ ಬೇಕಿದ್ದರೆ ಬರಲಿ: ಉಲ್ಟಾ ಹೊಡೆದ ನಖ್ವಿ
Mohsin Naqvi: ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವ. ಇದರ ಜೊತೆಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾ ಆಟಗಾರರು ಪಾಕ್ ವ್ಯಕ್ತಿಯಿಂದ ಏಷ್ಯಾಕಪ್ ಸ್ವೀಕರಿಸಲು ನಿರಾಕರಿಸಿತ್ತು.

ಏಷ್ಯಾಕಪ್ 2025ರ ವಿವಾದದ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಖ್ವಿ, ನಾನು ಯಾವುದೇ ತಪ್ಪು ಮಾಡಿಲ್ಲ. ಈಗಲೂ ಭಾರತಕ್ಕೆ ಟ್ರೋಫಿ ಹಸ್ತಾಂತರಿಸಲು ಸಿದ್ಧನಿದ್ದೇನೆ. ಆದರೆ ಟೀಮ್ ಇಂಡಿಯಾ ನಾಯಕ ಬಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಗೆ ಬಂದು ಟ್ರೋಫಿ ಸ್ವೀಕರಿಸಲಿ ಎಂದು ಮತ್ತೆ ಒತ್ತಿ ಹೇಳಿದ್ದಾತರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಪಾಕಿಸ್ತಾನದ ಆಂತರಿಕ ಸಚಿವಾಲಯದ ಮುಖ್ಯಸ್ಥರೂ ಆಗಿರುವ ನಖ್ವಿ, ಇತ್ತೀಚೆಗೆ ನಡೆದ ಎಸಿಸಿ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಮಾಧ್ಯಮ ವರದಿಗಳನ್ನು ಸಹ ನಿರಾಕರಿಸಿರುವ ಅವರು. ತಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದಿದ್ದಾರೆ.
ಎಸಿಸಿ ಅಧ್ಯಕ್ಷನಾಗಿ, ನಾನು ಆ ದಿನವೇ ಟ್ರೋಫಿಯನ್ನು ಹಸ್ತಾಂತರಿಸಲು ಸಿದ್ಧನಾಗಿದ್ದೆ. ನಾನು ಈಗಲೂ ಟ್ರೋಫಿ ನೀಡಲು ಸಿದ್ಧನಿದ್ದೇನೆ. ಅವರಿಗೆ ನಿಜವಾಗಿಯೂ ಏಷ್ಯಾಕಪ್ ಟ್ರೋಫಿ ಬೇಕಿದ್ದರೆ, ಎಸಿಸಿ ಕಚೇರಿಗೆ ಬಂದು ನನ್ನಿಂದ ಅದನ್ನು ಸ್ವೀಕರಿಸಲು ಸ್ವಾಗತ” ಎಂದು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದಿದ್ದಾರೆ.
ನಾನು ಸಂಪೂರ್ಣವಾಗಿ ಸ್ಪಷ್ಟಪಡಿಸುತ್ತೇನೆ, ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ನಾನು ಎಂದಿಗೂ ಬಿಸಿಸಿಐಗೆ ಕ್ಷಮೆಯಾಚಿಸಿಲ್ಲ. ಅಲ್ಲದೆ ನಾನು ಎಂದಿಗೂ ಕ್ಷಮೆ ಕೇಳಲ್ಲ. ಅವರಿಗೆ ಟ್ರೋಫಿ ಬೇಕಿದ್ದರೆ, ಎಸಿಸಿ ಕಚೇರಿಗೆ ಆಗಮಿಸಿ ಸ್ವೀಕರಿಸಲು ಯಾವುದೇ ಅಡ್ಡಿಯಿಲ್ಲ. ಹಾಗಾಗಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ದುಬೈನಲ್ಲಿರುವ ಎಸಿಸಿ ಕಚೇರಿಗೆ ಬಂದು ಏಷ್ಯಾಕಪ್ ಟ್ರೋಫಿ ಸ್ವೀಕರಿಸಲಿ ಎಂದು ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ನಖ್ವಿ ಟ್ರೋಫಿ ನೀಡಿಲ್ಲವೇಕೆ?
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಮೈದಾನದಲ್ಲಿ ಹೈಡ್ರಾಮಾ ಕೂಡ ನಡೆಯಿತು. ಪಂದ್ಯ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು.
ಇದಾಗ್ಯೂ ಭಾರತ ತಂಡ ಟ್ರೋಫಿ ಪಡೆಯುವುದಿಲ್ಲ ಎಂದೂ ಹೇಳಿರಲಿಲ್ಲ. ಮೊಹ್ಸಿನ್ ನಖ್ವಿ ಬದಲಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿಯನ್ನು ಹಸ್ತಾಂತರಿಸುವಂತೆ ವಿನಂತಿಸಿತ್ತು, ಆದರೆ ಮೊಹ್ಸಿನ್ ನಖ್ವಿ ಇದಕ್ಕೆ ಒಪ್ಪಿರಲಿಲ್ಲ.
ನಾನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ. ಇಲ್ಲಿ ನನ್ನ ತೀರ್ಮಾನವೇ ಮುಖ್ಯ. ನನ್ನ ಟ್ರೋಫಿ, ನನ್ನ ಇಷ್ಟ ಎಂಬ ವಾದವನ್ನು ಮುಂದಿಟ್ಟರು. ಅಲ್ಲದೆ ಕೆಲ ಕಾಲ ಯಾರೊಂದಿಗೊ ಫೋನ್ನಲ್ಲಿ ಮಾತನಾಡಿದರು. ಇದಾಗ್ಯೂ ಟೀಮ್ ಇಂಡಿಯಾ ಆಟಗಾರರು ತಮ್ಮ ನಿರ್ಧಾರವನ್ನು ಬದಲಿಸಿರಲಿಲ್ಲ.
ಇದರಿಂದ ಮತ್ತಷ್ಟು ಮುಖಭಂಗಕ್ಕೆ ಒಳಗಾದ ಮೊಹ್ಸಿನ್ ನಖ್ವಿ ಕೆಲ ಕಾಲ ವೇದಿಕೆಯಲ್ಲಿದ್ದರು. ಇದಾಗ್ಯೂ ಭಾರತೀಯ ಆಟಗಾರರು ತನ್ನಿಂದ ಟ್ರೋಫಿ ಸ್ವೀಕರಿಸಲ್ಲ ಎಂಬುದು ದೃಢವಾಗುತ್ತಿದ್ದಂತೆ, ಏಷ್ಯಾಕಪ್ ಹಾಗೂ ವಿನ್ನರ್ ತಂಡಕ್ಕೆ ನೀಡಲಾಗುವ ಪದಕಗಳನ್ನು ಹೊಟೇಲ್ಗೆ ಕೊಂಡೊಯ್ಯುವಂತೆ ನಖ್ವಿ ಸೂಚಿಸಿದ್ದರು. ಅಲ್ಲದೆ ಫೋಟೋಶೂಟ್ಗಾಗಿ ಚಾಂಪಿಯನ್ಸ್ ತಂಡದ ಮುಂದೆ ಇಡಲಾಗುವ ಚಾಂಪಿಯನ್ಸ್ ಬೋರ್ಡ್ ಅನ್ನು ಹಿಂದಕ್ಕೆ ಕೊಂಡೊಯ್ಯುವಂತೆ ಆಜ್ಞಾಪಿಸಿದ್ದರು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೆ ಸಂಭ್ರಮಿಸಿದ್ದರು.
ಇದನ್ನೂ ಓದಿ: IND vs PAK: ಟೀಮ್ ಇಂಡಿಯಾದಿಂದ ಟಾಸ್ ಫಿಕ್ಸಿಂಗ್: ಗಂಭೀರ ಆರೋಪ..!
ಸೆಪ್ಟೆಂಬರ್ 30 ರಂದು ನಡೆದ ಎಸಿಸಿ ಸಭೆಯಲ್ಲಿ ಮೊಹ್ಸಿನ್ ನಖ್ವಿ ಅವರ ನಡೆಗೆ ಬಿಸಿಸಿಐ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಖ್ವಿ ಕ್ಷಮೆಯಾಚಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ನಾನು ಯಾವುದೇ ಕ್ಷಮೆ ಕೇಳಿಲ್ಲ. ಟ್ರೋಫಿ ಬೇಕಿದ್ದರೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಗೆ ಬಂದು ಸ್ವೀಕರಿಸಲಿ ಎಂದು ಪುನರುಚ್ಚರಿಸಿದ್ದಾರೆ.
