5, 5, 2, 4, 6, 2, 3, 3, 6, 3.. ಇದು ಫೋನ್ ನಂಬರ್ ಅಲ್ಲ; ಆಫ್ರಿಕಾದ ಸ್ಕೋರ್‌ಬೋರ್ಡ್‌

Women's World Cup 2025: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಸ್ಪಿನ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 69 ರನ್‌ಗಳಿಗೆ ಆಲೌಟ್ ಆಯಿತು. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಸುಲಭ ಜಯ ಸಾಧಿಸಿತು. ಇದು ಈ ವಿಶ್ವಕಪ್‌ನಲ್ಲೇ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ದಾಖಲೆಯಾಗಿದೆ.

5, 5, 2, 4, 6, 2, 3, 3, 6, 3.. ಇದು ಫೋನ್ ನಂಬರ್ ಅಲ್ಲ; ಆಫ್ರಿಕಾದ ಸ್ಕೋರ್‌ಬೋರ್ಡ್‌
Eng Vs Sa

Updated on: Oct 03, 2025 | 6:13 PM

ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್​​ನ (Women’s World Cup) ನಾಲ್ಕನೇ ಪಂದ್ಯದಲ್ಲಿ ಇಂದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ (England vs South Africa) ತಂಡಗಳು ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು. ಆದರೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ ಮಹಿಳಾ ತಂಡ ಊಹೆಗೂ ನಿಲುಕದ ಕಳಪೆ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ಸ್ಪಿನ್ ದಾಳಿಗೆ ನಲುಕಿದ ಆಫ್ರಿಕಾ ತಂಡ ಕೇವಲ 20.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 69 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 15ನೇ ಓವರ್​ನಲ್ಲೇ ಜಯದ ನಗೆ ಬೀರಿತು.

69 ರನ್​ಗಳಿಗೆ ಆಲೌಟ್

ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಹೈವೋಲ್ಟೇಜ್ ಕದನವನ್ನು ಅಭಿಮಾನಿಗಳು ನಿರೀಕ್ಷಿಸಿದ್ದರು. ಏಕೆಂದರೆ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಕಳೆದ ವಿಶ್ವಕಪ್ ಫೈನಲಿಸ್ಟ್‌ಗಳಾದ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್. ಆದರೆ ಆಫ್ರಿಕಾದ ಪೆವಿಲಿಯನ್ ಪರೇಡ್ ನೋಡಿದ ಫ್ಯಾನ್ಸ್​ಗೆ ಭಾರಿ ನಿರಾಸೆ ಎದುರಾಯಿತು. ಕೇವಲ 69 ರನ್​ಗಳಿಗೆ ಆಲೌಟ್ ಆಗುವ ಮೂಲಕ ಆಫ್ರಿಕಾ ತಂಡ 2025 ರ ವಿಶ್ವಕಪ್‌ನ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತು.

ಆರಂಭದಿಂದಲೇ ಪೆವಿಲಿಯನ್ ಪರೇಡ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ನ ಎಡಗೈ ಸ್ಪಿನ್ನರ್ ಲಿನ್ಸೆ ಸ್ಮಿತ್ ಅವರ ಸ್ಪಿನ್ ಜಾದೂ ಮುಂದೆ ಅಕ್ಷರಶಃ ಶರಣಾಯಿತು. ಇನ್ನಿಂಗ್ಸ್‌ನ ಎರಡನೇ ಓವರ್‌ನಿಂದಲೇ ತಂಡದ ವಿಕೆಟ್​ಗಳು ಪತನಗೊಳ್ಳಲು ಪ್ರಾರಂಭಿಸಿದವು. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೂಲ್ವಾರ್ಡ್ಟ್ 5 ರನ್​ಗೆ ವಿಕೆಟ್ ಒಪ್ಪಿಸುವ ಮೂಲಕ ತಂಡದ ಪತನವನ್ನು ಆರಂಭಿಸಿದರು. ಆ ಬಳಿಕ ನಾಲ್ಕನೇ, ಐದನೇ ಮತ್ತು ಆರನೇ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ಬಳಿಕವೂ ತಂಡದ ಇನ್ನಿಂಗ್ಸ್ ಚೇತರಿಸಿಕೊಳ್ಳಲಿಲ್ಲ.

10 ಆಟಗಾರ್ತಿರು ಒಂದಂಕಿಗೆ ಔಟ್

ಪರಿಸ್ಥಿತಿ ಹೇಗಿತ್ತೆಂದರೆ ತಂಡದ ಪರ ಸಿನೋಲಾ ಜಾಫ್ತಾ ಮಾತ್ರ ಎರಡಂಕಿ ದಾಟಿ 22 ರನ್ ಕಲೆಹಾಕಿದ್ದನ್ನು ಬಿಟ್ಟರೆ ಉಳಿದ 10 ಆಟಗಾರ್ತಿರ ಸ್ಕೋರ್‌ ಕ್ರಮವಾಗಿ 5, 5, 2, 4, 6, 2, 3, 3, 6, 3 ರನ್ ಆಗಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಎರಡನೇ ಅತ್ಯಂತ ಕಡಿಮೆ ಮತ್ತು ಒಟ್ಟಾರೆ ಮೂರನೇ ಅತ್ಯಂತ ಕಡಿಮೆ ಮೊತ್ತವಾಗಿದೆ. ಇದಕ್ಕೂ ಮೊದಲು, 2009 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಫ್ರಿಕಾ ತಂಡ 51 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ 2019 ರ ಏಕದಿನ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧವೂ 63 ರನ್‌ಗಳಿಗೆ ಆಲೌಟ್ ಆಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Fri, 3 October 25