ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನಲ್ಲಿ ವಿಶ್ವದಾದ್ಯಂತದ ಮಾಜಿ ಲೆಜೆಂಡರಿ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ. ಈ ಲೀಗ್‌ನ 15ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಮತ್ತು ಇಂಡಿಯಾ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡ, ಇಂಡಿಯಾ ಚಾಂಪಿಯನ್ಸ್ ತಂಡವನ್ನು 54 ರನ್‌ಗಳಿಂದ ಮಣಿಸಿತು. ಇತ್ತ ಈ ಸೋಲಿನೊಂದಿಗೆ ಟೂರ್ನಿಯಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ ಸತತ ಮೂರನೇ ಸೋಲನ್ನು ಅನುಭವಿಸಬೇಕಾಯಿತು. ಆದರೆ ಈ ಹ್ಯಾಟ್ರಿಕ್ ಸೋಲಿನ ಹೊರತಾಗಿಯೂ ಇಂಡಿಯಾ ಚಾಂಪಿಯನ್ಸ್ ತಂಡ ಸೆಮಿಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ.
ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತಿದ್ದ ಇಂಡಿಯಾ ಚಾಂಪಿಯನ್ಸ್ ತಂಡ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧವೂ ಸೋತಿದೆ. ಅದಾಗ್ಯೂ ಉತ್ತಮ ರನ್ ರೇಟ್ ಆಧಾರದ ಮೇಲೆ ಇಂಡಿಯಾ ಚಾಂಪಿಯನ್ಸ್ ತಂಡವು ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನದ ಹೊರತಾಗಿ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಕೂಡ ಸೆಮಿಫೈನಲ್ಗೆ ಟಿಕೆಟ್ ಪಡೆದುಕೊಂಡಿವೆ. ಇದೀಗ ಸೆಮಿಫೈನಲ್ ಪಂದ್ಯಗಳು ಜುಲೈ 12 ರಂದು ನಡೆಯಲಿವೆ.
ಸೆಮಿಫೈನಲ್ ಸುತ್ತಿನಲ್ಲಿ ಒಂದೆಡೆ ವೆಸ್ಟ್ ಇಂಡೀಸ್ ಚಾಂಪಿಯನ್ ತಂಡ, ಪಾಕಿಸ್ತಾನ ಚಾಂಪಿಯನ್ ತಂಡವನ್ನು ಎದುರಿಸಿದರೆ, ಇನ್ನೊಂದೆಡೆ ಭಾರತ ಚಾಂಪಿಯನ್ ತಂಡ, ಆಸ್ಟ್ರೇಲಿಯಾ ಚಾಂಪಿಯನ್ ತಂಡವನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳು ಜುಲೈ 12 ರಂದು ನಡೆಯಲಿವೆ. ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಆರಂಭವಾಗಲಿದ್ದು, ಆಸ್ಟ್ರೇಲಿಯಾ ಚಾಂಪಿಯನ್ಸ್ ಮತ್ತು ಇಂಡಿಯಾ ಚಾಂಪಿಯನ್ಸ್ ನಡುವಿನ ಪಂದ್ಯ ರಾತ್ರಿ 9 ಗಂಟೆ ಸುಮಾರಿಗೆ ಆರಂಭವಾಗಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಲಿದ್ದು, ಜುಲೈ 13ರಂದು ಫೈನಲ್ ಪಂದ್ಯ ನಡೆಯಲಿದೆ.
ಇನ್ನು ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 210 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಚಾಂಪಿಯನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಶಕ್ತವಾಗಿ 54 ರನ್‌ಗಳಿಂದ ಸೋಲನುಭವಿಸಿತು. ದಕ್ಷಿಣ ಆಫ್ರಿಕಾ ಪರವಾಗಿ ಜಾಕ್ವೆಸ್ ಸ್ನಿಮನ್ ಬಿರುಸಿನ ಬ್ಯಾಟಿಂಗ್ ನಡೆಸಿ 43 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 73 ರನ್ ಗಳಿಸಿದರೆ, ರಿಚರ್ಡ್ ಲೆವಿ 25 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ಗಳ ನೆರವಿನಿಂದ 60 ರನ್ ಬಾರಿಸಿದರು.
ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್‌ನ ಬೌಲರ್‌ಗಳು ಎಂದಿನಂತೆ ದುಬಾರಿ ಎನಿಸಿಕೊಂಡರು. ಧವಳ್ ಕುಲಕರ್ಣಿ 4 ಓವರ್‌ಗಳಲ್ಲಿ 47 ರನ್ ನೀಡಿ ಒಂದು ವಿಕೆಟ್ ಪಡೆದರು. ವಿನಯ್ ಕುಮಾರ್ 3 ಓವರ್‌ಗಳಲ್ಲಿ 32 ರನ್ ನೀಡಿ ಒಂದು ವಿಕೆಟ್ ಪಡೆದರು. ತಂಡದ ಪರ ಪರಿಣಾಮಕಾರಿ ಬೌಲಿಂಗ್ ಮಾಡಿದ ಹರ್ಭಜನ್ ಸಿಂಗ್ 4 ಓವರ್‌ಗಳಲ್ಲಿ 25 ರನ್ ನೀಡಿ 4 ವಿಕೆಟ್ ಪಡೆದರು. ಯುವರಾಜ್ ಸಿಂಗ್ 2 ಓವರ್‌ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ನೀಡಿದ 211 ರನ್ಗಳ ಗುರಿ ಬೆನ್ನತ್ತಿದ್ದ ಭಾರತ ಚಾಂಪಿಯನ್ಸ್ ತಂಡಕ್ಕೆ ಒಂದರ ಹಿಂದೆ ಒಂದರಂತೆ ಹಿನ್ನಡೆ ಎದುರಾಯಿತು. ರಾಬಿನ್ ಉತ್ತಪ್ಪ 10 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರೆ, ನಮನ್ ಓಜಾ 7 ಎಸೆತಗಳಲ್ಲಿ 5 ರನ್ ಬಾರಿಸಲಷ್ಟೇ ಶಕ್ತರಾದರು. ಸುರೇಶ್ ರೈನಾ 24 ಎಸೆತಗಳಲ್ಲಿ 21 ರನ್ ಗಳಿಸಿದರೆ, ಅಂಬಟಿ ರಾಯುಡು 6 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಯುವರಾಜ್ ಸಿಂಗ್ 5 ಎಸೆತಗಳಲ್ಲಿ 5 ರನ್ ಬಾರಿಸಿದರೆ, ಇರ್ಫಾನ್ ಪಠಾಣ್ 21 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ಯೂಸುಫ್ ಪಠಾಣ್ 44 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 54 ರನ್ ಗಳಿಸಿದರು. ಅದಾಗ್ಯೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Thu, 11 July 24