Champions Trophy 2025: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ?
Champions Trophy 2025: 2008 ರಿಂದ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಕಳೆದ 12 ವರ್ಷಗಳಲ್ಲಿ ಉಭಯ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನು ಸಹ ಆಡಿಲ್ಲ. ಇದೀಗ ಐಸಿಸಿ ಟೂರ್ನಿಗೆ ಪಾಕಿಸ್ತಾನ್ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಭಾರತದ ಪಂದ್ಯಗಳನ್ನು ಸ್ಥಳಾಂತರಿಸಲು ಐಸಿಸಿಗೆ ಮನವಿ ಮಾಡಲಾಗಿದೆ.
2025ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಯ ತನ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಐಸಿಸಿಗೆ ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಆಯೋಜನೆ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೊಂದಿದೆ. ಆದರೆ ಪಾಕ್ನಲ್ಲಿ ಟೂರ್ನಿ ನಡದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಭಾರತದ ಪಂದ್ಯಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ.
ಭಾರತೀಯ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಪಾಕ್ನಲ್ಲಿ ಟೂರ್ನಿ ಆಡಲು ಸಾಧ್ಯವಿಲ್ಲ. ಹಾಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆಯೋಜನೆಯ ಹಕ್ಕಿನಲ್ಲೇ ತಟಸ್ಥ ಸ್ಥಳದಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸುವಂತೆ ಮನವಿ ಮಾಡಲಾಗಿದೆ. ಅದರಂತೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.
ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ. ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ಮುಂದಿಟ್ಟಿದೆ. ಅಲ್ಲದೆ ಭಾರತ ತಂಡ ಟೂರ್ನಿಯಿಂದೆ ಹಿಂದೆ ಸರಿದರೆ ಅದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿಗೆ ದೊಡ್ಡ ನಷ್ಟವನ್ನುಂಟು ಮಾಡಲಿದೆ. ಹೀಗಾಗಿ ಟೀಮ್ ಇಂಡಿಯಾದ ಪಂದ್ಯಗಳು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆದರೂ ಅಚ್ಚರಿಪಡಬೇಕಿಲ್ಲ.
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ:
ಒಂದು ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಂಪೂರ್ಣ ಟೂರ್ನಿಯನ್ನು ಶಿಫ್ಟ್ ಮಾಡಲು ಒಪ್ಪದಿದ್ದರೆ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಭಾರತದ ಪಂದ್ಯಗಳಿಗೆ ಯುಎಇ ಅಥವಾ ಶ್ರೀಲಂಕಾ ಆತಿಥ್ಯವಹಿಸಬಹುದು.
ಏಕೆಂದರೆ ಕಳೆದ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕ್ ಕ್ರಿಕೆಟ್ ಮಂಡಳಿ ಹೊಂದಿತ್ತು. ಆದರೆ ಭಾರತ ತಂಡವು ಪಾಕ್ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.
ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ನ್ನು ಆಯೋಜಿಸಲಾಗಿತ್ತು. ಇಲ್ಲಿ ಭಾರತ ತಂಡವು ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಬರಲು ಟೀಮ್ ಇಂಡಿಯಾ ಹಿಂದೇಟು ಹಾಕಿದ್ದು, ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಿದೆ.
ಕರಡು ವೇಳಾಪಟ್ಟಿ ಪ್ರಕಟ:
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈಗಾಗಲೇ ಚಾಂಪಿಯನ್ಸ್ ಟ್ರೋಫಿಯ ಕರಡು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯಂತೆ ಫೆಬ್ರವರಿ 19 ರಿಂದ ಟೂರ್ನಿ ಶುರುವಾಗಲಿದ್ದು, ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳಿಗೆ ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಭಾರತ ತಂಡವು ಲಾಹೋರ್ನಲ್ಲಿ ಮೂರು ಪಂದ್ಯಗಳನ್ನಾಡಲಿದೆ ಎಂದು ಪಿಸಿಬಿ ತಿಳಿಸಿದೆ.
ಚಾಂಪಿಯನ್ಸ್ ಟ್ರೋಫಿಯ ಕರಡು ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Gautam Gambhir Salary: ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ಗೆ ಸಿಗುವ ವೇತನ ಎಷ್ಟು?
ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ ತಂಡಗಳು:
- ಭಾರತ
- ಸೌತ್ ಆಫ್ರಿಕಾ
- ಆಸ್ಟ್ರೇಲಿಯಾ
- ನ್ಯೂಝಿಲ್ಯಾಂಡ್
- ಪಾಕಿಸ್ತಾನ್ (ಆತಿಥೇಯ ರಾಷ್ಟ್ರ)
- ಅಫ್ಘಾನಿಸ್ತಾನ್
- ಇಂಗ್ಲೆಂಡ್
- ಬಾಂಗ್ಲಾದೇಶ್
Published On - 11:54 am, Thu, 11 July 24