ಬಹುಮಾನ ಮೊತ್ತ ನನಗೆ ಬೇಡ, ಸಿಬ್ಬಂದಿಗಳಿಗೆ ನೀಡುವಂತೆ ಪಟ್ಟು ಹಿಡಿದಿದ್ದ ರೋಹಿತ್ ಶರ್ಮಾ
T20 World Cup 2024: ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ. ಈ ಬಹುಮಾನ ಮೊತ್ತದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತಲಾ 5 ಕೋಟಿ ರೂ. ಸಿಗಲಿದೆ. ಹಾಗೆಯೇ ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ. ನೀಡಲಾಗುತ್ತದೆ. ಇನ್ನು ಭಾರತ ತಂಡದ ಮೀಸಲು ಆಟಗಾರರಾಗಿ ಕಾಣಿಸಿಕೊಂಡ ಯಶಸ್ವಿ ಜೈಸ್ವಾಲ್, ಖಲೀಲ್ ಅಹ್ಮದ್, ರಿಂಕು ಸಿಂಗ್ ಹಾಗೂ ಅವೇಶ್ ಖಾನ್ಗೂ 1 ಕೋಟಿ ರೂ. ಸಿಗಲಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಬಹುಮಾನ ಮೊತ್ತವನ್ನು ಟೀಮ್ ಇಂಡಿಯಾದ ಸಿಬ್ಬಂದಿಗಳಿಗೆ ನೀಡಲು ಮುಂದಾಗಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿತ್ತು. ಈ ಬಹುಮಾನ ಮೊತ್ತದಲ್ಲಿ ಸಿಬ್ಬಂದಿ ವರ್ಗಗಳಿಗೆ ಉತ್ತಮ ಪಾಲು ಸಿಗಬೇಕೆಂದು ರೋಹಿತ್ ಶರ್ಮಾ ಬಯಸಿದ್ದರು. ಅಲ್ಲದೆ ಕಡಿಮೆ ಮೊತ್ತ ನೀಡಿದರೆ, ತನ್ನದೇ ಬಹುಮಾನ ಮೊತ್ತವನ್ನು ಸಿಬ್ಬಂದಿಗಳಿಗೆ ನೀಡಲು ಹಿಟ್ಮ್ಯಾನ್ ನಿರ್ಧರಿಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
ಟೀಮ್ ಇಂಡಿಯಾಗೆ 125 ಕೋಟಿ ರೂ. ಘೋಷಣೆಯಾದಾಗ ರೋಹಿತ್ ಶರ್ಮಾ ನಮ್ಮ ಪರವಾಗಿ ಧ್ವನಿ ಎತ್ತಿದ್ದರು. ಭಾರತ ತಂಡದ ಸಹಾಯಕ ಸಿಬ್ಬಂದಿಗಳಿಗೆ ಕಡಿಮೆ ಹಣ ನೀಡಬಾರದು ಎಂದಿದ್ದರು. ಅಲ್ಲದೆ ಅವರು ನಮಗಾಗಿ ತಮ್ಮದೇ ಆದ ಬೋನಸ್ ಮೊತ್ತವನ್ನು ತ್ಯಜಿಸಲು ಸಹ ಸಿದ್ಧರಾಗಿದ್ದರು. ಈ ಮೂಲಕ ಅವರಿಗೆ ಸಿಕ್ಕ ಬಹುಮಾನ ಮೊತ್ತವನ್ನು ನಮಗೆ ನೀಡಲು ಮುಂದಾಗಿದ್ದರು ಎಂದು ಹೆಸರು ಹೇಳಲಿಚ್ಛಿಸದ ಭಾರತ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 5 ಕೋಟಿ ರೂ. ಬಹುಮಾನ ಮೊತ್ತ ಪಡೆದಿದ್ದಾರೆ. ಒಂದು ವೇಳೆ ಸಹಾಯಕ ಸಿಬ್ಬಂದಿಗಳಿಗೆ ನೀಡಲಾಗುವ ಮೊತ್ತ ಕಡಿಮೆಯಾದರೆ, ತನ್ನ 5 ಕೋಟಿ ರೂ. ಅನ್ನು ಅವರಿಗೆ ನೀಡಲು ಹಿಟ್ಮ್ಯಾನ್ ಸಿದ್ಧರಾಗಿದ್ದರು. ಈ ಮೂಲಕ ಕಳೆದ ಕೆಲ ವರ್ಷಗಳಿಂದ ತೆರೆ ಮರೆಯಲ್ಲೇ ತಂಡದ ಏಳಿಗೆಗೆ ಶ್ರಮಿಸಿದ ಸಿಬ್ಬಂದಿಗಳಿಗೂ ತಕ್ಕ ಪ್ರತಿಫಲ ನೀಡಲು ರೋಹಿತ್ ಶರ್ಮಾ ಬಯಸಿದ್ದರು.
ಹೀಗೆ ಬಿಸಿಸಿಐ ಮುಂದೆ ಸಿಬ್ಬಂದಿ ವರ್ಗದವರಿಗೆ ಉತ್ತಮ ಪ್ರತಿಫಲ ಸಿಗಬೇಕೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ. ಅದರ ಫಲವಾಗಿ ಇದೀಗ ಪ್ರತಿಯೊಬ್ಬರಿಗೂ ಕೋಟಿ ರೂ. ಮೊತ್ತದಲ್ಲಿ ಬಹುಮಾನ ಹಣ ಲಭಿಸಿದೆ.
ಬಿಸಿಸಿಐ ಘೋಷಿಸಿದ ಬಹುಮಾನ ಮೊತ್ತದಲ್ಲಿ ಸಹಾಯಕ ಸಿಬ್ಬಂದಿಗಳಿಗೆ ಉತ್ತಮ ಪಾಲು ದೊರೆತಿದೆ. ಟೀಮ್ ಇಂಡಿಯಾದ 15 ಸದಸ್ಯರು ಮತ್ತು ರಾಹುಲ್ ದ್ರಾವಿಡ್ಗೆ ತಲಾ 5 ಕೋಟಿ ರೂ. ನಿಗದಿ ಮಾಡಿದರೆ, ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಥ್ರೋಡೌನ್ ಸ್ಟೆಷಲಿಸ್ಟ್ ಸೇರಿದಂತೆ ಇತರೆ ಸಿಬ್ಬಂದಿಗಳು 2 ಕೋಟಿ ರೂ. ಪಡೆದಿದ್ದಾರೆ.
ಬಹುಮಾನ ಮೊತ್ತ ಕಡಿತಗೊಳಿಸಿದ ದ್ರಾವಿಡ್:
ಮತ್ತೊಂದೆಡೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಮ್ಮ ಬಹುಮಾನ ಮೊತ್ತದಲ್ಲಿ ಕಡಿತ ಮಾಡಿಕೊಂಡಿದ್ದಾರೆ. ಬಿಸಿಸಿಐ ಘೋಷಿಸಿದ ಬಹುಮಾನ ಮೊತ್ತದಲ್ಲಿ ರಾಹುಲ್ ದ್ರಾವಿಡ್ 5 ಕೋಟಿ ರೂ. ಪಡೆದಿದ್ದಾರೆ. ಆದರೆ ಟೀಮ್ ಇಂಡಿಯಾದ ಇತರೆ ಕೋಚಿಂಗ್ ಸಿಬ್ಬಂದಿಗಳಿಗೆ ಬಿಸಿಸಿಐ 2.5 ಕೋಟಿ ರೂ. ಬಹುಮಾನ ಮೊತ್ತ ನಿಗದಿ ಮಾಡಿತ್ತು. ಈ ಸಮಾನತೆಯನ್ನು ಹೋಗಲಾಡಿಸಲು ರಾಹುಲ್ ದ್ರಾವಿಡ್ ತಮ್ಮ ಬಹುಮಾನ ಮೊತ್ತದಲ್ಲಿ ಕಡಿತ ಮಾಡಿಕೊಂಡಿದ್ದಾರೆ.
ದ್ರಾವಿಡ್ ಜೊತೆ ಕಾರ್ಯ ನಿರ್ವಹಿಸಿದ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರಿಗೆ ತಲಾ 2.5 ಕೋಟಿ ರೂ. ಪಡೆದಿದ್ದಾರೆ. ಅವರಂತೆ ನನಾನು ಸಹ 2.5 ಕೋಟಿ ರೂ. ಬಹುಮಾನವನ್ನು ತೆಗೆದುಕೊಳ್ಳುತ್ತೇನೆ ಎಂದು ಬಿಸಿಸಿಐ ಅಧಿಕಾರಿಗೆ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಿಚ್ಛೇದನದ ಸುದ್ದಿಯ ನಡುವೆ ಸಖತ್ ಸುಂದರಿ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ
ರೋಹಿತ್ ಶರ್ಮಾ ಕಂಬ್ಯಾಕ್ ಯಾವಾಗ?
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ಮುಂಬರುವ ಶ್ರೀಲಂಕಾ ಸರಣಿಯಿಂದ ಹೊರಗುಳಿಯಲಿದ್ದಾರೆ. ಅಲ್ಲದೆ ಬಾಂಗ್ಲಾದೇಶ್ ವಿರುದ್ಧ ಸರಣಿ ವೇಳೆ ಅವರು ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ವರೆಗೆ ಅವರೇ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕರಾಗಿ ಮುಂದುವರೆಯಲಿದ್ದಾರೆ.
Published On - 10:35 am, Thu, 11 July 24