ಭಾರತ-ಪಾಕ್ ಪಂದ್ಯ ಮಾತ್ರವಲ್ಲ.. ವಿಶ್ವಕಪ್ ವೇಳಾಪಟ್ಟಿಯಲ್ಲೂ ಬದಲಾವಣೆ! ಖಚಿತ ಪಡಿಸಿದ ಜಯ್ ಶಾ

|

Updated on: Jul 28, 2023 | 5:50 AM

World Cup 2023: ಕಳೆದೆರಡು ದಿನಗಳಿಂದ ಹರಿದಾಡುತ್ತಿದ್ದ ವಿಶ್ವಕಪ್ ವೇಳಾಪಟ್ಟಿಯ ಕುರಿತಾದಂತಹ ಊಹಾಪೋಹಗಳಿಗೆ ಕೊನೆಗೂ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತೆರೆ ಎಳೆದಿದ್ದಾರೆ.

ಭಾರತ-ಪಾಕ್ ಪಂದ್ಯ ಮಾತ್ರವಲ್ಲ.. ವಿಶ್ವಕಪ್ ವೇಳಾಪಟ್ಟಿಯಲ್ಲೂ ಬದಲಾವಣೆ! ಖಚಿತ ಪಡಿಸಿದ ಜಯ್ ಶಾ
ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ
Follow us on

ಕಳೆದೆರಡು ದಿನಗಳಿಂದ ಹರಿದಾಡುತ್ತಿದ್ದ ವಿಶ್ವಕಪ್ (World Cup 2023) ವೇಳಾಪಟ್ಟಿಯ ಕುರಿತಾದಂತಹ ಊಹಾಪೋಹಗಳಿಗೆ ಕೊನೆಗೂ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ (Jay Shah) ತೆರೆ ಎಳೆದಿದ್ದಾರೆ. ವಾಸ್ತವವಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ (India vs Pakistan) ನಡುವೆ ವಿಶ್ವಕಪ್ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಅದರಂತೆ ವೇಳಾಪಟ್ಟಿಯನ್ನು ಸಿದ್ದಪಡಿಸಿ, ಬಿಡುಗಡೆಗೊಳಿಸಲಾಗಿತ್ತು. ಆದರೆ ಅಕ್ಟೋಬರ್ 15 ರಿಂದ ಭಾರತದಲ್ಲಿ ನವರಾತ್ರಿ ಆರಂಭವಾಗುತ್ತಿರುವುದರಿಂದ ಭದ್ರತೆ ದೃಷ್ಟಿಯಿಂದ ಪಂದ್ಯದ ದಿನಾಂಕವನ್ನು ಬದಲಾಯಿಸುವಂತೆ ಭದ್ರತಾ ಏಜೆನ್ಸಿಗಳು ಬಿಸಿಸಿಐಗೆ (BCCI) ಸೂಚಿಸಿದ್ದವು. ಹೀಗಾಗಿ ನಿನ್ನೆ ಅಂದರೆ, ಜುಲೈ 27 ರಂದು ಸಭೆ ಕರೆದಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಸಭೆಯ ಬಳಿಕ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ.

ಗುರುವಾರ ನಡೆದ ಬಿಸಿಸಿಐ ಸಭೆಯಲ್ಲಿ ಕೇವಲ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಮಾತ್ರ ಚರ್ಚೆ ನಡೆಯದೆ, ವಿಶ್ವಕಪ್ ವೇಳಾಪಟ್ಟಿಯಲ್ಲಿನ ಕೆಲವು ಪಂದ್ಯಗಳ ದಿನಾಂಕವನ್ನು ಬದಲಿಸಲು ತೀರ್ಮಾನಿಸಲಾಗಿದೆ. ದಿನಾಂಕ ಬದಲಾವಣೆಯ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದಿದ್ದರೂ, ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಜಯ್​ ಶಾ ಹೇಳಿದ್ದಾರೆ.

BREAKING: ಭಾರತ- ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ದಿನಾಂಕ ಬದಲಾವಣೆ! ವರದಿ

ವಿಶ್ವಕಪ್ ವೇಳಾಪಟ್ಟಿ ಬದಲಾಗಲಿದೆ!

ಈ ಮೊದಲು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ದಿನಾಂಕ ಬದಲಾವಣೆಗೆ ಸಭೆ ಕರೆಯಲಾಗಿದೆ ಎಂದು ವರದಿಯಾಗಿತ್ತು. ಆದರೆ ಗುರುವಾರ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ವಿಶ್ವಕಪ್‌ನ ಎಲ್ಲಾ ಆತಿಥೇಯ ಸಂಸ್ಥೆಗಳು ವೇಳಾಪಟ್ಟಿಯನ್ನೇ ಬದಲಿಸಲು ಐಸಿಸಿಗೆ ಮನವಿ ಮಾಡಿವೆ. ಈ ಬಗ್ಗೆ ಸಭೆಯ ಬಳಿಕ ಮಾತನಾಡಿದ ಜಯ್​ ಶಾ, ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಮಾತ್ರವಲ್ಲದೆ, ವಿಶ್ವಕಪ್‌ನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಮೂರು ಸದಸ್ಯ ರಾಷ್ಟ್ರಗಳು ಐಸಿಸಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ದಿನಾಂಕ ಮಾತ್ರ ಬದಲಾಗುತ್ತದೆ

ಬಿಸಿಸಿಐ ಸಭೆಯ ನಂತರ, 23 ಸದಸ್ಯರ ಮಂಡಳಿಯು ವೇಳಾಪಟ್ಟಿಯನ್ನು ಬದಲಾಯಿಸುವಂತೆ ಐಸಿಸಿಗೆ ಮನವಿ ಮಾಡಿದ್ದರಿಂದ ಕೆಲವು ವಿಶ್ವಕಪ್ ಪಂದ್ಯಗಳ ದಿನಾಂಕಗಳನ್ನು ಬದಲಾಯಿಸಲಾಗುವುದು ಎಂದು ಜಯ್ ಶಾ ಖಚಿತಪಡಿಸಿದರು. ಪಂದ್ಯ ನಡೆಯುವ ಸ್ಥಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ದಿನಾಂಕ ಮಾತ್ರ ಬದಲಾಗಲಿದೆ ಎಂದು ಜಯ್ ಶಾ ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?

ವಾಸ್ತವವಾಗಿ, ಜೂನ್ 27 ರಂದು, ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಬೇಕಿತ್ತು. ಆದರೆ ಭದ್ರತೆ ದೃಷ್ಟಿಯಿಂದ ಪಂದ್ಯದ ದಿನಾಂಕವನ್ನು ಬದಲಿಸಲಾಗುತ್ತಿದ್ದು, ಅಕ್ಟೋಬರ್ 15 ರ ಬದಲು ಒಂದು ದಿನ ಮುಂಚಿತವಾಗಿ ಅಂದರೆ, ಅಕ್ಟೋಬರ್ 14 ರಂದು ಈ ಉಭಯ ದೇಶಗಳ ನಡುವೆ ಅಹಮದಾಬಾದ್​ನಲ್ಲೇ ಪಂದ್ಯ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ವಿಶ್ವಕಪ್ ವೇಳಾಪಟ್ಟಿಯ ಬದಲಾವಣೆಯನ್ನು ಖಚಿತಪಡಿಸಿರುವ ಜಯ್​ ಶಾ, ಬದಲಾಗಬೇಕಾದ ದಿನಾಂಕಗಳ ಬಗ್ಗೆ ಮುಂದೆ ಚರ್ಚೆ ನಡೆಸಲಾಗುತ್ತದೆ ಎಂದಷ್ಟೇ ಹೇಳಿದ್ದಾರೆ. ಹೀಗಾಗಿ ಭಾರತ ಹಾಗೂ ಪಾಕ್ ನಡುವಿನ ಪಂದ್ಯ ನಡೆಯುವುದರ ಬಗ್ಗೆಯೂ ಖಚಿತ ಮಾಹಿತಿ ಸಿಕ್ಕಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:46 am, Fri, 28 July 23