BREAKING: ಭಾರತ- ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ದಿನಾಂಕ ಬದಲಾವಣೆ! ವರದಿ

IND vs PAK, ODI World Cup 2023: ಅಕ್ಟೋಬರ್ 15 ರಂದು ಅಹಮದಾಬಾದ್​​ನಲ್ಲಿ ನಡೆಯಲ್ಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ದಿನಾಂಕ ಬದಲಾಗಬಹುದು ಎಂದು ವರದಿಯಾಗಿದೆ.

BREAKING: ಭಾರತ- ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ದಿನಾಂಕ ಬದಲಾವಣೆ! ವರದಿ
ಭಾರತ- ಪಾಕಿಸ್ತಾನ
Follow us
|

Updated on:Jul 26, 2023 | 9:05 AM

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರಿಕೆಟ್​ನ ಮಹಾಸಂಭ್ರಮಕ್ಕೆ ಆತಿಥ್ಯವಹಿಸಲು ಭಾರತ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ವಿಶ್ವಕಪ್ (ODI World Cup 2023) ಆಯೋಜಿಸುವ ಜವಬ್ದಾರಿ ಹೊತ್ತಿರುವ ಬಿಸಿಸಿಐ (BCCI), ಪಂದ್ಯಾವಳಿಗೆ ಯಾವುದೇ ಲೋಪ ಬರದಂತೆ ತಡೆಯಲು ಸಾಕಷ್ಟು ಶ್ರಮವಹಿಸುತ್ತಿದೆ. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ವೇಳಾಪಟ್ಟಿಯನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. ವರದಿಯಂತೆ ವಿಶ್ವಕಪ್ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗದಿದ್ದರೂ, ಅಕ್ಟೋಬರ್ 15 ರಂದು ಅಹಮದಾಬಾದ್​​ನಲ್ಲಿ (Narendra Modi Stadium, Ahmedabad) ನಡೆಯಲ್ಲಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಪಂದ್ಯದ ದಿನಾಂಕ ಬದಲಾಗಬಹುದು ಎಂದು ವರದಿಯಾಗಿದೆ.

ಈ ಉಭಯ ತಂಡಗಳ ನಡುವಿನ ಪಂದ್ಯದ ದಿನಾಂಕ ಬದಲಾಗಲು ಕಾರಣವೂ ಇದ್ದು, ಅಕ್ಟೋಬರ್ 15 ರಂದು ಭಾರತ- ಪಾಕ್ ನಡುವಿನ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಆದರೆ ಆ ದಿನದಿಂದಲೇ ಅಂದರೆ ಅಕ್ಟೋಬರ್ 15ರಿಂದಲೇ ಭಾರತದಲ್ಲಿ ನವರಾತ್ರಿ ಆರಂಭವಾಗಲಿದೆ. ಈ ಹಬ್ಬವನ್ನು ಉತ್ತರ ಭಾರತದಲ್ಲಿ ಅದರಲ್ಲೂ ಗುಜರಾತ್​ನಲ್ಲಿ ಭಾರಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಆ ದಿನದಂದು ಗುಜರಾತಿನಾದ್ಯಂತ ರಾತ್ರಿ ಇಡಿ ಗರ್ಬಾ ಡಾನ್ಸ್ ಮಾಡುವ ಮೂಲಕ ಸಂಭ್ರಮಿಸಲಾಗುತ್ತದೆ.

ಹೊರಬಿತ್ತು ಐವರು ಆಟಗಾರರ ಹೆಲ್ತ್ ರಿಪೋರ್ಟ್​; ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಕ್ಕೆ ಬಂತು ಆನೆಬಲ

ಭದ್ರತಾ ಸಂಸ್ಥೆಗಳು ನಮಗೆ ಸೂಚಿಸಿವೆ

ಗುಜರಾತ್​​ನ ರಾಜಧಾನಿಯಾದ ಅಹಮದಾಬಾದ್​ನಲ್ಲಿ ಭಾರತ- ಪಾಕ್ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಇದು ಭದ್ರತೆ ವಿಚಾರದಲ್ಲಿ ಕೊಂಚ ಹಿನ್ನಡೆಯುಂಟು ಮಾಡಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದ್ದು, ನವರಾತ್ರಿಯ ದಿನದಂದು ಗುಜರಾತಿನಾದ್ಯಂತ ರಾತ್ರಿಯಿಡಿ ಸಂಭ್ರಮಾಚರಣೆ ನಡೆಯುತ್ತದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ಪ್ರೊಫೈಲ್ ಪಂದ್ಯವನ್ನು ಆ ದಿನ ನಡೆಸಿದರೆ, ಈ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಜನರು ಅಹಮದಾಬಾದ್​ಗೆ ಬರುತ್ತಾರೆ. ಇದು ಭದ್ರತೆ ವಿಚಾರದಲ್ಲಿ ಸಮಸ್ಯೆಯನ್ನು ತಂದೊಡ್ಡಿದೆ. ಹೀಗಾಗಿ ಆ ದಿನದಂದು ಈ ಪಂದ್ಯವನ್ನು ನಡೆಸದಂತೆ ಭದ್ರತಾ ಸಂಸ್ಥೆಗಳು ನಮಗೆ ಸೂಚಿಸಿವೆ.  ಹೀಗಾಗಿ ಈ ಸಮಸ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ವರದಿ ಮಾಡಿದೆ.

ದಿನಾಂಕ ಬದಲಾದರೆ ಸಾಕಷ್ಟು ಸಮಸ್ಯೆ

ಆದರೆ, ಈಗ ಭಾರತ-ಪಾಕಿಸ್ತಾನ ಪಂದ್ಯವನ್ನು ಮರು ನಿಗದಿಪಡಿಸಿದರೆ ಅದರ ದಿನಾಂಕ ಬದಲಾಗುತ್ತದೆ. ಹಾಗಾಗಿ ಈಗಾಗಲೇ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿರುವ ಎಲ್ಲಾ ಅಭಿಮಾನಿಗಳಿಗೆ ಇದು ತೊಂದರೆಯನ್ನುಂಟುಮಾಡುತ್ತದೆ. ಅಲ್ಲದೆ ಪಂದ್ಯದ ದಿನಾಂಕ ಬದಲಾವಣೆಯಾದರೆ ಟಿವಿ ಪ್ರಸಾರಕರ ಟಿಆರ್​ಪಿ ಮೇಲೆಯೂ ಹೊಡೆತ ಬೀಳಲಿದೆ. ಹಾಗೆಯೇ ಈಗಾಗಲೇ ಬುಕ್ ಆಗಿರುವ ಹೋಟೆಲ್​ಗಳಿಗು ಸಾಕಷ್ಟು ಸಮಸ್ಯೆ ಎದುರಾಗಲಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಬಿಸಿಸಿಐ ಹಾಗೂ ಐಸಿಸಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಬಿಸಿಸಿಐ ಜೇಬಿಗೆ ಕತ್ತರಿ

ಬಿಸಿಸಿಐ ಕಳೆದ ತಿಂಗಳಷ್ಟೇ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ನಿಗದಿತ ವೇಳಾಪಟ್ಟಿಯ ಪ್ರಕಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಈ ಪಂದ್ಯದ ಹೊರತಾಗಿ ಇಲ್ಲಿ ಇನ್ನೂ 3 ಪಂದ್ಯಗಳು ನಡೆಯಬೇಕಿದ್ದು, ಇದರಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮತ್ತು ಫೈನಲ್ ಪಂದ್ಯ ನಡೆಯಬೇಕಿದೆ. ಹೀಗಾಗಿ ಈ ಎಲ್ಲಾ ಪಂದ್ಯಗಳ ದಿನಾಂಕ ಬದಲಾವಣೆ ಮಾಡಬೇಕಾಗಿ ಬಂದರೆ, ಲಾಭದ ವಿಚಾರದಲ್ಲಿ ಬಿಸಿಸಿಐಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ನರೇಂದ್ರ ಮೋದಿ ಮೈದಾನ ವಿಶ್ವದ ದೊಡ್ಡ ಕ್ರಿಕೆಟ್ ಮೈದಾನವಾಗಿರುವುದರಿಂದ ಈ ಪಂದ್ಯಗಳನ್ನು ನೋಡಲು ಬರುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಿರುತ್ತದೆ. ಇದರ ಲಾಭ ಪಡೆದು ಭಾರಿ ಆದಾಯ ಗಳಿಸುವ ಗುರಿಯನ್ನು ಬಿಸಿಸಿಐ ಹೊಂದಿತ್ತು.

ಜಯ್ ಶಾ ಸಭೆ

ಹೀಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡಿರುವ ಜಯ್​ ಶಾ, ಜುಲೈ 27 ರಂದು (ಗುರುವಾರ) ನವದೆಹಲಿಯಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಹೋಸ್ಟಿಂಗ್ ಸ್ಥಳಗಳ ಸದಸ್ಯರು ಭಾಗಿಯಾಗಲ್ಲಿದ್ದು, ಅಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:51 am, Wed, 26 July 23