
ಆಂಧ್ರ ಕ್ರಿಕೆಟ್ ಅಸೋಸಿಯೇಷನ್ (ACA) ಅಮರಾವತಿಯಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಪ್ರಸ್ತುತ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, ಇದನ್ನೂ ಮೀರಿಸುವಂತಹ ಸ್ಟೇಡಿಯಂ ನಿರ್ಮಿಸಲು ಎಸಿಎ ನಿರ್ಧರಿಸಿದೆ.
ಈ ಕ್ರಿಕೆಟ್ ಸ್ಟೇಡಿಯಂ 200 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು, ಇದಕ್ಕಾಗಿ ಆಂಧ್ರ ಪ್ರದೇಶ ರಾಜ್ಯ ಸರ್ಕಾರದಿಂದ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ನೆರವು ಕೋರಿದೆ. ಈ ಹೊಸ ಕ್ರೀಡಾಂಗಣದ ನಿರ್ಮಾಣವು ವಿಶ್ವ ದರ್ಜೆಯ ಕ್ರಿಕೆಟ್ ಮೂಲಸೌಕರ್ಯವನ್ನು ಒದಗಿಸುವುದಲ್ಲದೆ, ಅಮರಾವತಿಯನ್ನು ಜಾಗತಿಕ ಕ್ರೀಡಾ ಕ್ಷೇತ್ರವಾಗಿ ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಎಸಿಎ ಅಭಿಪ್ರಾಯಪಟ್ಟಿದೆ.
ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಟ್ಟು 1.32 ಲಕ್ಷ ಆಸನಗಳ ವ್ಯವಸ್ಥೆಯಿದೆ. ಇದೀಗ ಇದಕ್ಕಿಂತಲೂ ದೊಡ್ಡ ಸ್ಟೇಡಿಯಂ ನಿರ್ಮಿಸಲು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಪ್ಲ್ಯಾನ್ ರೂಪಿಸಿದೆ. ಈ ಯೋಜನೆಯಂತೆ ಹೊಸ ಕ್ರೀಡಾಂಗಣದಲ್ಲಿ 1.50 ಲಕ್ಷ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇರಲಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿದ ಎಸಿಎ ಅಧ್ಯಕ್ಷ ಕೇಶಿನೇನಿ ಶಿವನಾಥ್, ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಈ ಯೋಜನೆ ಮೈಲಿಗಲ್ಲು ಆಗಲಿದೆ. ಈ ಕ್ರೀಡಾಂಗಣದ ಜೊತೆಗೆ ಆಂಧ್ರಪ್ರದೇಶದ ಉತ್ತರ ಕರಾವಳಿ, ವಿಜಯವಾಡ ಮತ್ತು ರಾಯಲಸೀಮಾದಲ್ಲಿ ಅತ್ಯಾಧುನಿಕ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಎಸಿಎ ಯೋಜಿಸಿದೆ.
ಯೋಜನೆಯ ಅನುಷ್ಠಾನಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಹಣಕಾಸಿನ ನೆರವು ಪಡೆಯಲು ಎಸಿಎ ಯೋಜಿಸಿದೆ. ಎಸಿಎ 2029 ರ ವೇಳೆಗೆ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸುವ ಗುರಿಯನ್ನು ಹೊಂದಿದ್ದು, ಇದರ ಜೊತೆ ರಾಜ್ಯದಲ್ಲಿ ಕ್ರಿಕೆಟ್‌ನ ಮತ್ತಷ್ಟು ಅಭಿವೃದ್ಧಿಗೆ ಮುಂದಾಗಲಿದ್ದೇವೆ ಎಂದು ತಿಳಿಸಿದ್ದಾರೆ. ಇದಲ್ಲದೆ, ಮುಂದಿನ 2 ವರ್ಷಗಳಲ್ಲಿ ಐಪಿಎಲ್‌ನಲ್ಲಿ ಆಡಲು ಕನಿಷ್ಠ 15 ಯುವ ಆಟಗಾರರನ್ನು ಪರಿಚಯಿಸುವ ಗುರಿಯನ್ನು ಸಹ ACA ಹೊಂದಿದೆ.
ಕೊಹ್ಲಿ ಕಣಕ್ಕಿಳಿಯಲಿರುವ ಪಂದ್ಯದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಎಸಿಎ ಮಂಡಳಿಯು ಈಗಾಗಲೇ ಆಂಧ್ರಪ್ರದೇಶ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿದೆ. 60 ಎಕರೆ ಭೂಮಿಗೆ ಅಧಿಕೃತ ಅನುಮತಿ ಪಡೆಯುವುದು, ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿದ ಇತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಾರ್ಯಕ್ಕೆ ಕೈ ಹಾಕಿದ್ದಾರೆ.