ಸೌತ್ ಆಫ್ರಿಕಾ ಟಿ20 ಲೀಗ್ನ 22ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಫಾಫ್ ಡುಪ್ಲೆಸಿಸ್ ವಿಶೇಷ ಮೈಲುಗಲ್ಲು ಮುಟ್ಟಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಸನ್ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ಧದ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವುದರೊಂದಿಗೆ ಫಾಫ್ ಟಿ20 ಕ್ರಿಕೆಟ್ನಲ್ಲಿ 400 ಮ್ಯಾಚ್ಗಳನ್ನಾಡಿದ ಸಾಧಕರ ಪಟ್ಟಿಗೆ ಸೇರ್ಪಡೆಯಾದರು.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 399 ಪಂದ್ಯಗಳನ್ನಾಡಿದ್ದರೆ, ಫಾಫ್ ಡುಪ್ಲೆಸಿಸ್ ಇದೀಗ 400 ಪಂದ್ಯಗಳ ಗುರಿ ಮುಟ್ಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಫಾಫ್ಗೂ ಮುನ್ನ ಡೇವಿಡ್ ಮಿಲ್ಲರ್ (516) ಹಾಗೂ ಇಮ್ರಾನ್ ತಾಹಿರ್ (426) ಮಾತ್ರ ಸೌತ್ ಆಫ್ರಿಕಾ ಪರ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಫಾಫ್ ಡುಪ್ಲೆಸಿಸ್ ಎಂಟ್ರಿ ಕೊಟ್ಟಿದ್ದಾರೆ.
ಹಾಗೆಯೇ ಟಿ20 ಕ್ರಿಕೆಟ್ ಇತಿಹಾಸದಲ್ಲಿ 400 ಪಂದ್ಯಗಳನ್ನಾಡಿದ ವಿಶ್ವದ 22ನೇ ಆಟಗಾರನೆಂಬ ಕೀರ್ತಿಗೂ ಫಾಫ್ ಡುಪ್ಲೆಸಿಸ್ ಪಾತ್ರರಾಗಿದ್ದಾರೆ. ಸೌತ್ ಆಫ್ರಿಕಾ, ಆರ್ಸಿಬಿ, ಸಿಎಸ್ಕೆ, ಜೆಎಸ್ಕೆ ಸೇರಿದಂತೆ ಹಲವು ತಂಡಗಳ ಪರ ಒಟ್ಟು 400 ಟಿ20 ಪಂದ್ಯಗಳನ್ನಾಡಿರುವ ಫಾಫ್ 11102 ರನ್ ಕಲೆಹಾಕಿದ್ದಾರೆ.
ಈ 11102 ರನ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಸೌತ್ ಆಫ್ರಿಕಾದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ಮಿಲ್ಲರ್. ಟಿ20 ಕ್ರಿಕೆಟ್ನಲ್ಲಿ 516 ಪಂದ್ಯಗಳನ್ನಾಡಿರುವ ಮಿಲ್ಲರ್ ಒಟ್ಟು 11139 ರನ್ ಕಲೆಹಾಕಿದ್ದಾರೆ.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಈವರೆಗೆ 399 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 382 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ 9 ಶತಕ ಹಾಗೂ 97 ಅರ್ಧಶತಕಗಳೊಂದಿಗೆ ಒಟ್ಟು 12886 ರನ್ ಕಲೆಹಾಕಿದ್ದಾರೆ. ಅಂದರೆ ಇಲ್ಲಿ ಫಾಫ್ ಡುಪ್ಲೆಸಿಸ್ ಪಂದ್ಯಗಳ ಸಂಖ್ಯೆಯಲ್ಲಿ ಮುಂದಿದ್ದರೆ, ವಿರಾಟ್ ಕೊಹ್ಲಿ ರನ್ಗಳಿಕೆ ಮುಂದಿದ್ದಾರೆ ಎಂಬುದು ವಿಶೇಷ.
ಇನ್ನು ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್, ಮುಂಬೈ ಇಂಡಿಯನ್ಸ್, ಟ್ರಿನಿಡಾಡ್ ನೈಟ್ ರೈಡರ್ಸ್ ಸೇರಿದಂತೆ ವಿಶ್ವದ ಹಲವು ತಂಡಗಳ ಪರ ಪೊಲಾರ್ಡ್ ಒಟ್ಟು 694 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲೇ ಅತ್ಯಧಿಕ ಮ್ಯಾಚ್ಗಳನ್ನಾಡಿದ ವಿಶ್ವ ದಾಖಲೆ ಬರೆದಿದ್ದಾರೆ.
Published On - 11:23 am, Mon, 27 January 25