- Kannada News Photo gallery Cricket photos Rohit Sharma, yashaswi Jaiswal,shreyas Iyer Miss Ranji Match for England Series
Ranji Trophy: ರಣಜಿ ಮುಂದಿನ ಪಂದ್ಯಕ್ಕೆ ರೋಹಿತ್, ಶ್ರೇಯಸ್, ಜೈಸ್ವಾಲ್, ದುಬೆ ಅಲಭ್ಯ
Ranji Trophy: ಭಾರತ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ನಡೆಯುವ ನಾಗ್ಪುರ ಶಿಬಿರದಲ್ಲಿ ಭಾಗವಹಿಸಲು ರಣಜಿ ಟ್ರೋಫಿ ಪಂದ್ಯದಿಂದ ಹೊರಗುಳಿದಿದ್ದಾರೆ. ಶಿವಂ ದುಬೆಯವರೂ ಟೀಂ ಇಂಡಿಯಾದಲ್ಲಿ ಸೇರಿದ್ದರಿಂದ ಮುಂಬೈ ತಂಡದಿಂದ ಹೊರಗುಳಿದಿದ್ದಾರೆ. ಈ ನಾಲ್ವರೂ ಆಟಗಾರರು ಇತ್ತೀಚಿನ ರಣಜಿ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು.
Updated on: Jan 27, 2025 | 8:20 PM

ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ನಂತರ ಉಭಯ ತಂಡಗಳ ನಡುವೆ 3 ಏಕದಿನ ಪಂದ್ಯಗಳೂ ನಡೆಯಲಿವೆ. ಈ ನಡುವೆ ಟಿ20 ತಂಡದ ಭಾಗವಾಗಿರದ ಆಟಗಾರರು ಪ್ರಸ್ತುತ ದೇಶೀಯ ಟೂರ್ನಿ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರ ಹೆಸರುಗಳು ಸೇರಿವೆ.

ಈ ಮೂವರು ಆಟಗಾರರು ಮುಂಬೈ ತಂಡದ ಭಾಗವಾಗಿದ್ದಾರೆ. ಇತ್ತೀಚೆಗೆ ಈ ಸ್ಟಾರ್ ಆಟಗಾರರ ಸಮ್ಮುಖದಲ್ಲಿ ಮುಂಬೈ ತಂಡ ಜಮ್ಮು-ಕಾಶ್ಮೀರ ವಿರುದ್ಧ ಸೋಲನುಭವಿಸಬೇಕಾಯಿತು. ಇದೀಗ ಮುಂಬೈ ತಂಡವು ಮೇಘಾಲಯ ವಿರುದ್ಧ ಜನವರಿ 30 ರಿಂದ ಮುಂದಿನ ಪಂದ್ಯವನ್ನು ಆಡಬೇಕಾಗಿದೆ. ಆದರೆ ಅದಕ್ಕೂ ಮುನ್ನ ತಂಡದ ಬಗ್ಗೆ ಒಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.

ಮುಂಬೈ ಮತ್ತು ಮೇಘಾಲಯ ತಂಡಗಳ ನಡುವಿನ ಈ ಪಂದ್ಯ ಜನವರಿ 30 ರಿಂದ ಬಿಕೆಸಿಯ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಭಾರತದ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಲಭ್ಯರಿರುವುದಿಲ್ಲ.

ವಾಸ್ತವವಾಗಿ, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲು ನಾಗ್ಪುರದಲ್ಲಿ ಒಂದು ಸಣ್ಣ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಮೂವರು ಆಟಗಾರರು ಆ ಶಿಬಿರಕ್ಕೆ ಹಾಜರಾಗಬೇಕಿದೆ. ಹೀಗಾಗಿ ಈ ಮೂವರು ಆಟಗಾರರು ಮುಂದಿನ ರಣಜಿ ಪಂದ್ಯದಿಂದ ಹೊರಬಿದ್ದಿದ್ದಾರೆ. ಮತ್ತೊಂದೆಡೆ, ಆಲ್‌ರೌಂಡರ್ ಶಿವಂ ದುಬೆ ಕೂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಕ್ಕೆ ಸೇರ್ಪಡೆಯಾಗಿರುವುದರಿಂದ ಅವರು ಕೂಡ ಮುಂಬೈ ತಂಡದ ಪರ ಆಡುತ್ತಿಲ್ಲ.

ಇನ್ನು ರಣಜಿ ಟ್ರೋಫಿ ಪಂದ್ಯದಲ್ಲಿ ಈ ನಾಲ್ವರು ಆಟಗಾರರು ವಿಫಲರಾಗಿದ್ದರು. ರೋಹಿತ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 3 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 28 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ ಕೂಡ ಮೊದಲ ಇನಿಂಗ್ಸ್‌ನಲ್ಲಿ 4 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ಗಳಿಸಿ ವಿಕೆಟ್ ಕೈಚೆಲ್ಲಿದ್ದರು.

ಶ್ರೇಯಸ್ ಅಯ್ಯರ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 17 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಮತ್ತೊಂದೆಡೆ, ಶಿವಂ ದುಬೆಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಈ ಆಟಗಾರರು ಮುಂಬರುವ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.



















