- Kannada News Photo gallery Cricket photos BBL 2025: Mitchell Owen Shatters Records With Fastest Century
ಬಿಬಿಎಲ್ನ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ ಮಿಚೆಲ್ ಓವನ್
BBL 2025 Final: ಬಿಗ್ ಬ್ಯಾಷ್ ಲೀಗ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ ತಂಡವು 20 ಓವರ್ಗಳಲ್ಲಿ 182 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು 14.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಹೋಬಾರ್ಟ್ ಹರಿಕೇನ್ಸ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ 23 ವರ್ಷದ ಮಿಚೆಲ್ ಓವನ್.
Updated on: Jan 28, 2025 | 9:27 AM

ಬಿಗ್ ಬ್ಯಾಷ್ ಲೀಗ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಮೂಡಿಬಂದಿದೆ. ಆದರೆ ಅದು ಅಂತಿಂಥ ಶತಕವಲ್ಲ. ಬದಲಾಗಿ ಬಿರುಗಾಳಿ ಸೆಂಚುರಿ. ಹೀಗೆ ಸಿಡಿಲಬ್ಬರದ ಸೆಂಚುರಿ ಸಿಡಿಸಿ ಸಂಚಲನ ಸೃಷ್ಟಿಸಿದ ಆಟಗಾರನ ಹೆಸರು ಮಿಚೆಲ್ ಓವನ್. ಈ ಶತಕದೊಂದಿಗೆ ಮಿಚೆಲ್ ಬಿಗ್ ಬ್ಯಾಷ್ ಲೀಗ್ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಅತೀ ವೇಗದ ಶತಕ: ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ದಾಖಲೆ ಮಿಚೆಲ್ ಓವನ್ ಪಾಲಾಗಿದೆ. 2014 ರಲ್ಲಿ ಕ್ರೇಗ್ ಸಿಮ್ಮನ್ಸ್ 39 ಎಸೆತಗಳಲ್ಲಿ ಶತಕ ಸಿಡಿಸಿದರೂ, ಅಂದು ಅವರು ಕೇವಲ 16 ಬೌಂಡರಿಯನ್ನು ಮಾತ್ರ ಬಾರಿಸಿದ್ದರು. ಆದರೆ ಮಿಚೆಲ್ ಓವನ್ 17 ಬೌಂಡರಿಗಳೊಂದಿಗೆ 39 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಮೂಲಕ ಬಿಬಿಎಲ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಅತ್ಯಧಿಕ ಸಿಕ್ಸ್: ಬಿಬಿಎಲ್ ಫೈನಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ಕೂಡ ಮಿಚೆಲ್ ಓವನ್ ತಮ್ಮದಾಗಿಸಿಕೊಂಡಿದ್ದಾರೆ. ಸಿಡ್ನಿ ಥಂಡರ್ ವಿರುದ್ಧದ ಫೈನಲ್ ಪಂದ್ಯದಲ್ಲಿ 11 ಸಿಕ್ಸ್ ಸಿಡಿಸಿ ಮಿಚೆಲ್ ಈ ದಾಖಲೆ ನಿರ್ಮಿಸಿದ್ದಾರೆ.

ಕಿರಿಯ ಸೆಂಚುರಿ ಸರದಾರ: ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಕೂಡ ಮಿಚೆಲ್ ಓವನ್ ಪಾಲಾಗಿದೆ. 23 ವರ್ಷದ ಮಿಚೆಲ್ 39 ಎಸೆತಗಳಲ್ಲಿ ಶತಕ ಪೂರೈಸಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅತೀ ವೇಗದ ಅರ್ಧಶತಕ: ಬಿಬಿಎಲ್ ಫೈನಲ್ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಕೂಡ ಮಿಚೆಲ್ ಓವನ್ ಹೆಸರಿಗೆ ಸೇರ್ಪಡೆಯಾಗಿದೆ. ಸಿಡ್ನಿ ಥಂಡರ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮಿಚೆಲ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಈ ದಾಖಲೆ ಬರೆದಿದ್ದಾರೆ.

ಒಟ್ಟಿನಲ್ಲಿ ಒಂದು ಭರ್ಜರಿ ಶತಕದೊಂದಿಗೆ ಮಿಚೆಲ್ ಓವನ್ ಬಿಗ್ ಬ್ಯಾಷ್ ಲೀಗ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈ ಸಂಚಲನದೊಂದಿಗೆ ಮಿಚೆಲ್ ಆಸ್ಟ್ರೇಲಿಯನ್ ತಂಡದ ಆಯ್ಕೆ ಸಮಿತಿಯ ಗಮನ ಸೆಳೆದಿದ್ದು, ಹೀಗಾಗಿ 23 ವರ್ಷದ ಟ್ಯಾಸ್ಮೆನಿಯನ್ ದಾಂಡಿಗ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.



















