ಆಸ್ಟ್ರೇಲಿಯಾ ತಂಡದ ಆಟಗಾರ್ತಿ ಲಾರೆನ್ ಚೀಟಲ್ (Lauren Cheatle) ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿದಿದ್ದಾರೆ. ಈ ಬಾರಿಯ WPL ಹರಾಜಿನಲ್ಲಿ ಲಾರೆನ್ ಅವರನ್ನು ಗುಜರಾತ್ ಜೈಂಟ್ಸ್ ಫ್ರಾಂಚೈಸಿ 30 ಲಕ್ಷ ರೂ. ನೀಡಿ ಖರೀದಿಸಿತ್ತು. ಅಲ್ಲದೆ ಈ ಬಾರಿಯ ಟೂರ್ನಿಗಾಗಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿತ್ತು.
ಆದರೀಗ ಚರ್ಮದ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಲಾರೆನ್ ಚೀಟಲ್ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಗುಜರಾತ್ ಜೈಂಟ್ಸ್ ಫ್ರಾಂಚೈಸಿ ಇದೀಗ ಬದಲಿ ಆಟಗಾರ್ತಿಯನ್ನು ಆಯ್ಕೆ ಮಾಡಬೇಕಿದೆ.
25 ವರ್ಷದ ಲಾರೆನ್ ಚೀಟಲ್ ಈಗಾಗಲೇ ಆಸ್ಟ್ರೇಲಿಯಾ ಪರ 1 ಟೆಸ್ಟ್ ಹಾಗೂ 4 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು 7 ಟಿ20 ಪಂದ್ಯಗಳಿಂದ 5 ವಿಕೆಟ್ ಪಡೆದಿದ್ದಾರೆ.
ಆಸೀಸ್ ಬಳಗದ ಭರವಸೆಯ ವೇಗಿಗಳಲ್ಲಿ ಗುರುತಿಸಿಕೊಂಡಿದ್ದ ಲಾರೆನ್ ಇದೀಗ ಚಿಕಿತ್ಸೆಯ ಕಾರಣ ಮೈದಾನದಿಂದ ಹೊರಗುಳಿಯಬೇಕಾಗಿ ಬಂದಿದೆ. ಇದಾಗ್ಯೂ ಮುಂದಿನ ಆಫ್-ಸೀಸನ್ ವಿರಾಮದ ಬಳಿಕ ನ್ಯೂ ಸೌತ್ ವೇಲ್ಸ್ ತರಬೇತಿ ಕೇಂದ್ರಕ್ಕೆ ಮರಳುವ ಗುರಿಯನ್ನು ಚೀಟಲ್ ಹೊಂದಿದ್ದಾರೆ.
ಗುಜರಾತ್ ಜೈಂಟ್ಸ್ (GG) ತಂಡ: ಆಶ್ಲೀಗ್ ಗಾರ್ಡ್ನರ್*, ಬೆತ್ ಮೂನಿ*, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್*, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್*, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಕ್ಯಾಥರಿನ್ ಬ್ರೈಸ್*, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.
ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಸೀಸನ್-2 ವೇಳಾಪಟ್ಟಿ ಪ್ರಕಟವಾಗಿದೆ. ಬಹುನಿರೀಕ್ಷಿತ ಮಹಿಳಾ ಕ್ರಿಕೆಟ್ ಟೂರ್ನಿ ಫೆಬ್ರವರಿ 23 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 17 ರಂದು ನಡೆಯಲಿದೆ. ಈ ಬಾರಿಯ ಟೂರ್ನಿಯು ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಯಲಿದೆ.
ಇದನ್ನೂ ಓದಿ: Babar Azam: ಮೂರು ಶ್ರೇಯಾಂಕ ಪಟ್ಟಿಯಲ್ಲೂ ಬಾಬರ್ ಆಝಂ ಮಿಂಚಿಂಗ್
Published On - 12:29 pm, Thu, 1 February 24