ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ (WPL 2024) 17ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೇವಲ 1 ರನ್‌ಗಳಿಂದ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ (Delhi Capitals vs Royal Challengers Bangalore) ಪ್ಲೇ ಆಫ್ಗೆ ಪ್ರವೇಶ ಪಡೆದಿದೆ. ಇತ್ತ ರಣರೋಚಕ ಪಂದ್ಯದಲ್ಲಿ ಸೋತ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ಪ್ಲೇ ಆಫ್ಗೇರಲು ಹರಸಾಹಸ ಪಡಬೇಕಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಸ್ಮೃತಿ ಮಂಧಾನ (Smriti Mandhana) ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯವರೆಗೂ ಹೋರಾಟ ನಡೆಸಿದರೂ 20 ಓವರ್‌ಗಳಲ್ಲಿ 180 ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 1 ರನ್‌ಗಳಿಂದ ಸೋಲನುಭವಿಸಿತು. ಈ ಮೂಲಕ ದೆಹಲಿಯನ್ನು ಸೋಲಿಸುವ ಬೆಂಗಳೂರು ತಂಡದ ಕನಸು ಕನಸಾಗಿಯೇ ಉಳಿಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪವರ್ ಪ್ಲೇನಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಜೊತೆಗೆ ಶಫಾಲಿ ವರ್ಮಾ 53 ರನ್‌ಗಳ ಪ್ರಬಲ ಆರಂಭವನ್ನು ನೀಡಿದರು. ಆದರೆ ಪವರ್ ಪ್ಲೇ ಅಂತ್ಯದ ನಂತರ ಶಫಾಲಿ ವರ್ಮಾ 18 ಎಸೆತಗಳಲ್ಲಿ 23 ರನ್ ಗಳಿಸಿ ಆಶಾ ಶೋಭನಾ ಎಸೆತದಲ್ಲಿ ಔಟಾದರು. ನಂತರ 60 ರನ್ ಆಗುವಷ್ಟರಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಕೂಡ ಶ್ರೇಯಾಂಕಾ ಪಾಟೀಲ್ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ಪೆವಿಲಿಯನ್‌ಗೆ ಮರಳಿದರು. ಮೆಗ್ ಲ್ಯಾನಿಂಗ್ 26 ಎಸೆತಗಳಲ್ಲಿ 29 ರನ್ ಗಳಿಸಿದರು. ಇಬ್ಬರೂ ಆರಂಭಿಕರು ಔಟಾದ ನಂತರ, ಜೆಮಿಮಾ ರಾಡ್ರಿಗಸ್ ಮತ್ತು ಆಲಿಸ್ ಕ್ಯಾಪ್ಸೆ ಡೆಲ್ಲಿ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಮೂರನೇ ವಿಕೆಟ್‌ಗೆ 97 ರನ್‌ಗಳ ಅತ್ಯುತ್ತಮ ಜೊತೆಯಾಟವನ್ನು ಮಾಡಿದರು.
WPL 2024: ಟಾಸ್ ಗೆದ್ದ ಡೆಲ್ಲಿ; ಆರ್‌ಸಿಬಿ ಮೊದಲು ಬೌಲಿಂಗ್
ಜೆಮಿಮಾ ರೋಡ್ರಿಗಸ್ 36 ಎಸೆತಗಳಲ್ಲಿ 58 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಲ್ಲಿ ಅವರು 8 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಜೆಮಿಮಾ ರಾಡ್ರಿಗಸ್ ಔಟಾದ ನಂತರ, ಆಲಿಸ್ ಕ್ಯಾಪ್ಸಿ ಕೂಡ 32 ಎಸೆತಗಳಲ್ಲಿ 48 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮರಿಜ್ನೆ ಕಪ್ 6 ಎಸೆತಗಳಲ್ಲಿ 12 ರನ್ ಗಳಿಸಿ ಡೆಲ್ಲಿ ತಂಡದ ಮೊತ್ತವನ್ನು 181ಕ್ಕೆ ತಲುಪಿಸಿದರು. ಬೆಂಗಳೂರು ಪರ ಬೌಲಿಂಗ್ನಲ್ಲಿ ಶ್ರೇಯಾಂಕಾ ಪಾಟೀಲ್ ಗರಿಷ್ಠ 4 ವಿಕೆಟ್ ಪಡೆದರೆ, ಆಶಾ ಶೋಭನಾ ಒಂದು ವಿಕೆಟ್ ಪಡೆದರು.
ಡೆಲ್ಲಿ ನೀಡಿದ 182 ರನ್‌ಗಳ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ನಾಯಕಿ ಸ್ಮೃತಿ ಮಂಧಾನ 7 ಎಸೆತಗಳಲ್ಲಿ 5 ರನ್ ಗಳಿಸಿ ಆಲಿಸ್ ಕ್ಯಾಪ್ಸಿ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು. ಇದಾದ ಬಳಿಕ ಆಸ್ಟ್ರೇಲಿಯದ ಬ್ಯಾಟರ್ ಎಲಿಸ್ ಪೆರ್ರಿ ಬೆಂಗಳೂರಿನ ಇನ್ನಿಂಗ್ಸ್ ಅನ್ನು ಕೈಗೆತ್ತಿಕೊಂಡು ಡೆಲ್ಲಿಯ ಬೌಲಿಂಗ್ ಮೇಲೆ ದಾಳಿ ಆರಂಭಿಸಿದರು. ಎಲಿಸ್ ಪೆರ್ರಿ ಮತ್ತು ಸೋಫಿ ಮೊಲಿನೆಕ್ಸ್ ಎರಡನೇ ವಿಕೆಟ್‌ಗೆ 80 ರನ್‌ಗಳ ಅತ್ಯುತ್ತಮ ಜೊತೆಯಾಟವನ್ನು ಮಾಡಿದರು. ಆದರೆ ಎಲ್ಲಿಸ್ ಪೆರ್ರಿ ರನೌಟ್ ಆದ ನಂತರ ಈ ಜೊತೆಯಾಟ ಮುರಿದುಬಿತ್ತು.
ಎಲ್ಲಿಸ್ ಪೆರ್ರಿ ರನೌಟ್ ಆಗುವ ಮೊದಲು 32 ಎಸೆತಗಳಲ್ಲಿ 49 ರನ್‌ಗಳ ವಿಶೇಷ ಇನ್ನಿಂಗ್ಸ್ ಆಡಿದ್ದರು. ಪೆರ್ರಿ ಅವರ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು. ಸೋಫಿ ಮೊಲಿನೆಕ್ಸ್ ಕೂಡ ಪೆರ್ರಿಗೆ ಉತ್ತಮ ಬೆಂಬಲ ನೀಡಿದರು. ಆದರೆ ಪೆರ್ರಿ ಔಟಾದ ನಂತರ, ಅವರು ಕೂಡ 30 ಎಸೆತಗಳಲ್ಲಿ 33 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಒಂದೊಮ್ಮೆ ಬಲಿಷ್ಠ ಸ್ಥಿತಿಯಲ್ಲಿದ್ದ ಆರ್‌ಸಿಬಿ ಆ ನಂತರ ಹಿನ್ನಡೆ ಅನುಭವಿಸಿತು.
ಅಲ್ಪ ಇನ್ನಿಂಗ್ಸ್ ಆದರೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೋಫಿ ಡಿವೈನ್, 16 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಆದರೆ ತಂಡದ ಪರ ಗೆಲುವಿಗಾಗಿ ಹೋರಾಡಿದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ ಕಲೆಹಾಕಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ವಾಸ್ತವವಾಗಿ ಕೊನೆಯ ಓವರ್ನಲ್ಲಿ ಆರ್‌ಸಿಬಿ ಗೆಲುವಿಗೆ 17 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಟ್ರೈಕ್ನಲ್ಲಿದ್ದ ರಿಚಾ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಮೂರನೇ ಎಸೆತದಲ್ಲಿ 1 ರನ್ ಮಾತ್ರ ಬಂತು. 4ನೇ ಎಸೆತದಲ್ಲಿ 2 ರನ್ಗಳು ಬಂದವು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ 8 ರನ್ ಬೇಕಿತ್ತು. ಈ ವೇಳೆ ಸ್ಟ್ರೈಕ್ನಲ್ಲಿದ್ದ ರಿಚಾ ಐದನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕೆ ತಂದರು. ಕೊನೆಯ ಎಸೆತದಲ್ಲಿ ತಂಡಕ್ಕೆ 2 ರನ್ ಬೇಕಿತ್ತು. ಆದರೆ ಕೊನೆಯ ಎಸೆತದಲ್ಲಿ ರನ್ ಕದಿಯುವ ವೇಳೆ ರಿಚಾ ರನ್ಔಟ್ಗೆ ಬಲಿಯಾದರು. ಅಂತಿಮವಾಗಿ ಡೆಲ್ಲಿ ತಂಡ 1 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
Published On - 11:04 pm, Sun, 10 March 24