AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2024 Final: ಮತ್ತೆ ಒಂದಂಕಿಗೆ ಸುಸ್ತಾದ ಶ್ರೇಯಸ್- ರಹಾನೆ

Ranji Trophy 2024 Final: 69 ಎಸೆತಗಳನ್ನು ಎದುರಿಸಿದ ಶಾರ್ದೂಲ್ ಠಾಕೂರ್ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 75 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು. ಅಂತಿಮವಾಗಿ ಮುಂಬೈ ತಂಡ 224 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.

Ranji Trophy 2024 Final: ಮತ್ತೆ ಒಂದಂಕಿಗೆ ಸುಸ್ತಾದ ಶ್ರೇಯಸ್- ರಹಾನೆ
ಶ್ರೇಯಸ್ ಅಯ್ಯರ್- ಅಜಿಂಕ್ಯ ರಹಾನೆ
ಪೃಥ್ವಿಶಂಕರ
|

Updated on:Mar 10, 2024 | 9:20 PM

Share

ಪ್ರಸ್ತುತ ಭಾರತ ತಂಡದಿಂದ ಹೊರಗುಳಿದಿರುವ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ (Shreyas Iyer) ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಮುಂಬೈ ಪರ ಕಣಕ್ಕಿಳಿಯುತ್ತಿರುವ ಅಯ್ಯರ್, ಇಂದಿನಿಂದ ಆರಂಭವಾಗಿರುವ ವಿದರ್ಭ ವಿರುದ್ಧದ (Mumbai vs Vidarbha) ರಣಜಿ ಫೈನಲ್ (Ranji Trophy Final) ಪಂದ್ಯದಲ್ಲಿ ಮತ್ತೊಮ್ಮೆ ರನ್​ಗಳಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲೂ ಒಂದಂಕಿಗೆ ಸುಸ್ತಾಗಿದ್ದ ಅಯ್ಯರ್, ಇದೀಗ ಫೈನಲ್ ಪಂದ್ಯದಲ್ಲಿ ಒಂದಂಕಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಕೇವಲ 92 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್​ಗೆ ಬಂದ ಶ್ರೇಯಸ್ ಅಯ್ಯರ್ ಕೂಡ ಕೇವಲ 7 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಮುಂಬೈಗೆ ಉತ್ತಮ ಆರಂಭ

ಈ ಪಂದ್ಯದಲ್ಲಿ ಪೃಥ್ವಿ ಶಾ ಮತ್ತು ಭೂಪೇನ್ ಲಾಲ್ವಾನಿ ಮುಂಬೈ ತಂಡಕ್ಕೆ ಉತ್ತಮ ಆರಂಭ ನೀಡಿ ಮೊದಲ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದರು. ಇದಾದ ನಂತರ ತಂಡವು ಹಠಾತ್ ವಿಕೆಟ್ ಕಳೆದುಕೊಳ್ಳಲಾರಂಭಿಸಿತು, ಇದರಲ್ಲಿ ಶಾ 46 ರನ್ ಮತ್ತು ಭೂಪೇನ್ 37 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಅದೇ ವೇಳೆ ಮುಶೀರ್ ಖಾನ್ ಕೂಡ ವಿಶೇಷ ಸಾಧನೆ ಮಾಡಲು ಸಾಧ್ಯವಾಗದೆ ಕೇವಲ 6 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇದಾದ ನಂತರ ಎಲ್ಲರೂ ಶ್ರೇಯಸ್ ಅಯ್ಯರ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿದ್ದರು ಆದರೆ ಅವರೂ 15 ಎಸೆತಗಳನ್ನು ಆಡಿ 7 ರನ್ ಗಳಿಸಿ ಉಮೇಶ್ ಯಾದವ್‌ಗೆ ಬಲಿಯಾದರು. ಇದಕ್ಕೂ ಮುನ್ನ ಅಯ್ಯರ್ ತಮಿಳುನಾಡು ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 8 ಎಸೆತಗಳಲ್ಲಿ 3 ರನ್ ಗಳಿಸಿ ಔಟಾಗಿದ್ದರು.

ಮುಂದುವರೆದ ರಹಾನೆ ಕಳಪೆ ಫಾರ್ಮ್​

ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ಅವರಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಇಬ್ಬರೂ ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ ಮತ್ತು ರನ್ ಗಳಿಸಲಿಲ್ಲ. ರಹಾನೆ ಅವರನ್ನು ಕೇವಲ 7 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಹರ್ಷ್ ದುಬೆ ಬಲಿಪಡೆದರೆ, ಶ್ರೇಯಸ್ ಅಯ್ಯರ್ ಅವರ ಬ್ಯಾಟ್‌ನಿಂದಲೂ ರನ್‌ ಬರಲಿಲ್ಲ. ಮಧ್ಯಮ ಕ್ರಮಾಂಕ ಕುಸಿದ ಬಳಿಕ ಒಂದರ ಹಿಂದೆ ಒಂದರಂತೆ ವಿಕೆಟ್‌ಗಳು ಬೀಳುತ್ತಿದ್ದಂತೆ ಮುಂಬೈನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಕಷ್ಟದ ಸಮಯದಲ್ಲಿ, ಲಾರ್ಡ್ ಶಾರ್ದೂಲ್ ಮತ್ತೊಮ್ಮೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು.

ಶಾರ್ದೂಲ್ ಠಾಕೂರ್ ಕ್ರೀಸ್‌ನ ಒಂದು ತುದಿಯಲ್ಲಿ ಭಧ್ರವಾಗಿ ಬೇರೂರಿ, ಬಿರುಗಾಳಿಯ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ವೇಗದ ಬ್ಯಾಟಿಂಗ್‌ ನಡೆಸಿದ ಶಾರ್ದೂಲ್‌ ಠಾಕೂರ್‌ ಅಬ್ಬರದ ಅರ್ಧಶತಕ ಗಳಿಸಿದರು. 69 ಎಸೆತಗಳನ್ನು ಎದುರಿಸಿದ ಶಾರ್ದೂಲ್ ಠಾಕೂರ್ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 75 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು. ಅಂತಿಮವಾಗಿ ಮುಂಬೈ ತಂಡ 224 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ವಿದರ್ಭ ಪರ ಹರ್ಷ್ ದುಬೆ ಮತ್ತು ಯಶ್ ಠಾಕೂರ್ ತಲಾ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ 2 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 pm, Sun, 10 March 24