Rahul Dravid: ಕೇಂದ್ರ ಒಪ್ಪಂದದಿಂದ ಶ್ರೇಯಸ್- ಕಿಶನ್ ಔಟ್; ಮೊದಲ ಬಾರಿಗೆ ಮೌನ ಮುರಿದ ದ್ರಾವಿಡ್

Rahul Dravid: ಯಾವ ಆಟಗಾರನಿಗೆ ಗುತ್ತಿಗೆ ಸಿಗುತ್ತದೆ ಎಂಬುದನ್ನು ನಿರ್ಧರಿಸುವವನು ನಾನಲ್ಲ. ಮಂಡಳಿ ಮತ್ತು ಆಯ್ಕೆದಾರರು ಇದನ್ನು ನಿರ್ಧರಿಸುತ್ತಾರೆ. ಅಲ್ಲದೆ ಒಪ್ಪಂದದ ಮಾನದಂಡವೂ ನನಗೆ ತಿಳಿದಿಲ್ಲ. 15 ಆಟಗಾರರ ತಂಡವನ್ನು ಆಯ್ಕೆ ಮಾಡುವಾಗ ಮಾತ್ರ ನನ್ನ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

Rahul Dravid: ಕೇಂದ್ರ ಒಪ್ಪಂದದಿಂದ ಶ್ರೇಯಸ್- ಕಿಶನ್ ಔಟ್; ಮೊದಲ ಬಾರಿಗೆ ಮೌನ ಮುರಿದ ದ್ರಾವಿಡ್
ರಾಹುಲ್ ದ್ರಾವಿಡ್, ಇಶಾನ್ ಕಿಶನ್- ಶ್ರೇಯಸ್ ಅಯ್ಯರ್
Follow us
ಪೃಥ್ವಿಶಂಕರ
|

Updated on: Mar 09, 2024 | 8:54 PM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಭಾರತ ತಂಡ (India vs England) ಈ 5 ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ. ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯವನ್ನು ಇನಿಂಗ್ಸ್ ಮತ್ತು 64 ರನ್‌ಗಳಿಂದ ಗೆದ್ದ ಟೀಮ್ ಇಂಡಿಯಾ 4-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಸರಣಿಯ ಸಮಯದಲ್ಲಿ, ಎರಡು ತಂಡಗಳು ಅದ್ಭುತ ಪ್ರದರ್ಶನದ ಮೂಲಕ ಟೆಸ್ಟ್​ಗೆ ಹೊಸ ಮೆರಗು ತಂದಿದಲ್ಲದೆ, ತಮ್ಮ ಆಟದ ಶೈಲಿಯಿಂದ ಸಾಕಷ್ಟುಚರ್ಚೆ ಹುಟ್ಟು ಹಾಕಿದ್ದವು. ಆದರೆ ಈ ಸರಣಿಯ ಹೊರತಾಗಿ ಭಾರತ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿದ ಸುದ್ದಿಯೆಂದರೆ ಅದು ಇಶಾನ್ ಕಿಶನ್ (Ishan Kishan) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಬಿಸಿಸಿಐನ ಕೇಂದ್ರ ಒಪ್ಪಂದದಿಂದ ಹೊರಗಿಟ್ಟಿದ್ದು. ಬಿಸಿಸಿಐನ ಈ ನಿರ್ಧಾಕ್ಷಣ್ಯ ಕ್ರಮದ ಬಗ್ಗೆ ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆದಿದ್ದವು. ಕೆಲವು ಕ್ರಿಕೆಟ್ ಪಂಡಿತರು ಈ ಇಬ್ಬರು ಕ್ರಿಕೆಟಿಗರ ವಿಚಾರದಲ್ಲಿ ಬಿಸಿಸಿಐ ನಿಲುವನ್ನು ಹೊಗಳಿದ್ದರೆ, ಇನ್ನೂ ಕೆಲವರು ಉಳಿದ ಕ್ರಿಕೆಟಿಗರ ಉದಾಹರಣೆ ನೀಡಿ ಬಿಸಿಸಿಐ ಕ್ರಮವನ್ನು ಟೀಕಿಸಿದ್ದರು. ಆದರೆ ಈ ಬಗ್ಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೀಗ ಟೆಸ್ಟ್ ಸರಣಿ ಗೆಲುವಿನ ನಂತರ ಮಾತನಾಡಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮೊದಲ ಬಾರಿಗೆ ಇಬ್ಬರೂ ಆಟಗಾರರನ್ನು ಒಪ್ಪಂದದಿಂದ ಕೈಬಿಟ್ಟ ಬಗ್ಗೆ ಮತ್ತು ತಂಡದಲ್ಲಿ ಈ ಇಬ್ಬರ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಿಶನ್- ಶ್ರೇಯಸ್​ಗೆ ಕೋಕ್

ವಾಸ್ತವವಾಗಿ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮೊದಲು ತಂಡದಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡು ತವರಿಗೆ ವಾಪಸ್ಸಾಗಿದ್ದರು. ಅಂದಿನಿಂದ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಆಫ್ರಿಕಾ ಪ್ರವಾಸದಿಂದ ಕಿಶನ್ ಹೊರಬಿದ್ದ ಬಳಿಕ, ಕಿಶನ್ ದೇಶಿ ಕ್ರಿಕೆಟ್ ಆಡುವಂತೆ ತಂಡದ ಕೋಚ್ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದರು. ಆದರೆ ಇಶಾನ್ ರಣಜಿ ಆಡುವುದಕ್ಕೆ ಹಿಂದೇಟು ಹಾಕಿದರು. ಇವರೊಂದಿಗೆ ಅಯ್ಯರ್ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಂತರ ತಂಡದಿಂದ ಹೊರಬಿದ್ದಿದ್ದರು. ಆಗ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಟೀಂ ಇಂಡಿಯಾದಿಂದ ಹೊರಗಿರುವ ಆಟಗಾರರು ರಣಜಿ ಟ್ರೋಫಿ ಆಡುವಂತೆ ಸೂಚನೆ ನೀಡಿದ್ದರು. ಆದರೆ ಇಬ್ಬರೂ ಆಟಗಾರರು ರಣಜಿ ಆಡುವುದಕ್ಕೆ ಹಿಂದೇಟು ಹಾಕಿದರು. ಇದರಿಂದ ಅಸಮಾಧಾನಗೊಂಡಿದ್ದ ಬಿಸಿಸಿಐ ಈ ಇಬ್ಬರನ್ನು ಕೇಂದ್ರ ಒಪ್ಪಂದದಿಂದ ಕೈಬಿಟ್ಟಿತ್ತು.

IND vs ENG: ಇಶಾನ್ ಕಿಶನ್​ಗೆ ಮತ್ತೊಂದು ಎಚ್ಚರಿಕೆ ನೀಡಿದ ಕೋಚ್ ದ್ರಾವಿಡ್..!

ದ್ರಾವಿಡ್ ಹೇಳಿದ್ದೇನು?

ಧರ್ಮಶಾಲಾ ಟೆಸ್ಟ್ ಗೆಲುವಿನ ನಂತರ, ಕೋಚ್ ರಾಹುಲ್ ದ್ರಾವಿಡ್ ಅವರನ್ನು ಸುದ್ದಿಗೋಷ್ಠಿಯಲ್ಲಿ ಈ ಇಬ್ಬರು ಆಟಗಾರರ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ದ್ರಾವಿಡ್, ಇಬ್ಬರೂ ಆಟಗಾರರು ಇನ್ನೂ ಟೀಂ ಇಂಡಿಯಾದ ಯೋಜನೆಗಳ ಭಾಗವಾಗಿದ್ದಾರೆ. ಅವರು ಯಾವಾಗಲೂ ತಂಡದ ಯೋಜನೆಯ ಭಾಗವಾಗಿದ್ದಾರೆ ಮತ್ತು ದೇಶೀಯ ಕ್ರಿಕೆಟ್ ಆಡುವವರು ಯಾವಾಗಲೂ ತಂಡದ ಭಾಗವಾಗಿರುತ್ತಾರೆ ಎಂದು ಹೇಳಿದರು. ಅಲ್ಲದೆ ಕೇಂದ್ರ ಒಪ್ಪಂದದಿಂದ ಈ ಇಬ್ಬರು ಆಟಗಾರರನ್ನು ಕೈಬಿಡುವಲ್ಲಿ ನನ್ನ ಪಾತ್ರವೇನು ಇಲ್ಲ ಎಂದು ದ್ರಾವಿಡ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ದ್ರಾವಿಡ್, ಯಾವ ಆಟಗಾರನಿಗೆ ಗುತ್ತಿಗೆ ಸಿಗುತ್ತದೆ ಎಂಬುದನ್ನು ನಿರ್ಧರಿಸುವವನು ನಾನಲ್ಲ. ಮಂಡಳಿ ಮತ್ತು ಆಯ್ಕೆದಾರರು ಇದನ್ನು ನಿರ್ಧರಿಸುತ್ತಾರೆ. ಅಲ್ಲದೆ ಒಪ್ಪಂದದ ಮಾನದಂಡವೂ ನನಗೆ ತಿಳಿದಿಲ್ಲ. 15 ಆಟಗಾರರ ತಂಡವನ್ನು ಆಯ್ಕೆ ಮಾಡುವಾಗ ಮಾತ್ರ ನನ್ನ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ. ಆ ನಂತರ ನಾನು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ ಆಡುವ ಹನ್ನೊಂದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದನ್ನು ಬಿಟ್ಟರೆ ಆಟಗಾರರು ಒಪ್ಪಂದವನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ