Ashwin: ನೂರನೇ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಅಶ್ವಿನ್
India vs England: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿತ್ತು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ 4 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದಿದೆ.
Updated on: Mar 10, 2024 | 7:29 AM

ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin).

ಈ ಪಂದ್ಯದಲ್ಲಿ ಒಟ್ಟು 25.4 ಓವರ್ಗಳನ್ನು ಎಸೆದಿದ್ದ ಅಶ್ವಿನ್ 9 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದರು. ಈ ಒಂಭತ್ತು ವಿಕೆಟ್ಗಳೊಂದಿಗೆ ಟೀಮ್ ಇಂಡಿಯಾ ಸ್ಪಿನ್ನರ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಲೆಜೆಂಡ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ 100ನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವಿಶ್ವ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿತ್ತು. ಮುರಳೀಧರನ್ ತಮ್ಮ 100ನೇ ಪಂದ್ಯದಲ್ಲಿ 141 ರನ್ ನೀಡಿ 9 ವಿಕೆಟ್ ಕಬಳಿಸಿ ಮಿಂಚಿದ್ದರು.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ 128 ರನ್ ನೀಡಿ 9 ವಿಕೆಟ್ ಕಬಳಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಈ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

ಇದಲ್ಲದೆ, ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಪರ ಟೆಸ್ಟ್ನಲ್ಲಿ ಅತೀ ಹೆಚ್ಚು ಬಾರಿ ಐದು ವಿಕೆಟ್ ಪಡೆದ ವಿಶೇಷ ದಾಖಲೆಯನ್ನು ಕೂಡ ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿತ್ತು. ಕುಂಬ್ಳೆ ಒಟ್ಟು 35 ಬಾರಿ 5 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು.

ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಉರುಳಿಸುವ ಮೂಲಕ ರವಿಚಂದ್ರನ್ ಅಶ್ವಿನ್ 36ನೇ ಬಾರಿ ಐದು ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಐದು ವಿಕೆಟ್ಗಳನ್ನು ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.



















