WPL 2024: ಗೆದ್ದವರಿಗೆ ಫೈನಲ್ ಟಿಕೆಟ್; ಮುಂಬೈ ತಂಡವನ್ನು ಮಣಿಸುತ್ತಾ ಆರ್​ಸಿಬಿ?

WPL 2024 Eliminator: ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ಎರಡನೇ ಫೈನಲಿಸ್ಟ್ ಆಗಲು ತೀವ್ರ ಪೈಪೋಟಿ ನಡೆಯಲಿದೆ. ಮಂಧಾನ ತಂಡ ಈ ಸೀಸನ್​ನಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕರಲ್ಲಿ ಗೆಲುವಿನ ರುಚಿ ಕಂಡಿದೆ. ಅದೇ ಸಮಯದಲ್ಲಿ ಮುಂಬೈ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ.

WPL 2024: ಗೆದ್ದವರಿಗೆ ಫೈನಲ್ ಟಿಕೆಟ್; ಮುಂಬೈ ತಂಡವನ್ನು ಮಣಿಸುತ್ತಾ ಆರ್​ಸಿಬಿ?
ಆರ್​ಸಿಬಿ- ಮುಂಬೈ

Updated on: Mar 14, 2024 | 10:26 PM

ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನ ಎಲಿಮಿನೇಟರ್ (WPL 2024 Eliminator) ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Mumbai Indians vs Royal Challengers Bangalore) ನಡುವೆ ಇದೇ ಶುಕ್ರವಾರದಂದು ಅಂದರೆ ಮಾರ್ಚ್​ 15 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur ) ನೇತೃತ್ವದ ಮುಂಬೈ ತಂಡವು ಈ ಸೀಸನ್​ನಲ್ಲಿ ಎರಡನೇ ಸ್ಥಾನ ಗಳಿಸಿದರೆ ಆರ್​ಸಿಬಿ ಮೂರನೇ ಸ್ಥಾನ ಗಳಿಸಿತು. ಬುಧವಾರ ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ತಂಡ ಮತ್ತೊಮ್ಮೆ ಗೆದ್ದು ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಳೆದ ಸೀಸನ್​ನಲ್ಲಿಯೂ ಡೆಲ್ಲಿ ಮೊದಲು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಫೈನಲ್​ನಲ್ಲಿ ಮುಂಬೈ ಎದುರು ಸೋಲನುಭವಿಸಬೇಕಾಯಿತು.

ಮುಂಬೈಗೆ ಮೇಲುಗೈ

ಇನ್ನು ಇದೇ ಶುಕ್ರವಾರ (ಮಾರ್ಚ್ 15) ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ಎರಡನೇ ಫೈನಲಿಸ್ಟ್ ಆಗಲು ತೀವ್ರ ಪೈಪೋಟಿ ನಡೆಯಲಿದೆ. ಮಂಧಾನ ತಂಡ ಈ ಸೀಸನ್​ನಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕರಲ್ಲಿ ಗೆಲುವಿನ ರುಚಿ ಕಂಡಿದೆ. ಅದೇ ಸಮಯದಲ್ಲಿ ಮುಂಬೈ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ಈ ಸೀಸನ್​ನಲ್ಲಿ ಎರಡು ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಒಂದು ಪಂದ್ಯವನ್ನು ಹರ್ಮನ್ಪ್ರೀತ್ ಕೌರ್ ತಂಡ ಗೆದ್ದುಕೊಂಡಿದ್ದರೆ, ಇನ್ನೊಂದು ಪಂದ್ಯವನ್ನು ಆರ್​ಸಿಬಿ ಗೆದ್ದಿದೆ. ಅದೇ ಸಮಯದಲ್ಲಿ, ಕಳೆದ ಸೀಸನ್‌ನಲ್ಲಿಯೂ ಎರಡು ತಂಡಗಳ ನಡುವೆ ಎರಡು ಲೀಗ್ ಪಂದ್ಯಗಳು ನಡೆದಿದ್ದು ಅದರಲ್ಲಿ ಮುಂಬೈ ಎರಡೂ ಪಂದ್ಯಗಳನ್ನು ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ನೋಡಿದರೆ ಮುಂಬೈ, ಆರ್​ಸಿಬಿ ವಿರುದ್ಧ ಮೇಲುಗೈ ಸಾಧಿಸಿದೆ ಎಂಬುದು ಸ್ಪಷ್ಟವಾಗುತ್ತದೆ.

WPL 2024: 16 ವರ್ಷಗಳ ಪ್ರಶಸ್ತಿ ಬರ ನೀಗಿಸುತ್ತಾ ಆರ್​ಸಿಬಿ ಮಹಿಳಾ ಪಡೆ? ನಾಳೆಯೇ ನಿರ್ಣಾಯಕ ಪಂದ್ಯ

ಮೊದಲ ಬಾರಿಗೆ ಆರ್​ಸಿಬಿ ಪ್ಲೇ ಆಫ್​ಗೆ

ಮಾರ್ಚ್ 12ರಂದು ನಡೆದ 19ನೇ ಲೀಗ್ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ದಿಟ್ಟ ಪ್ರದರ್ಶನ ನೀಡಿ ಕೇವಲ 15 ರನ್‌ಗಳಿಗೆ ಆರು ವಿಕೆಟ್ ಪಡೆದರು. ಆ ಬಳಿಕ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿದ ಪೆರ್ರಿ ಅಜೇಯ 40 ರನ್ ದಾಖಲಿಸಿದರು. ಪೆರ್ರಿ ಅವರ ಈ ಆಲ್​ರೌಂಡರ್ ಪ್ರದರ್ಶನದಿಂದಾಗಿ ಮುಂಬೈ 19 ಓವರ್‌ಗಳಲ್ಲಿ 113 ರನ್‌ಗಳಿಗೆ ಕುಸಿಯಿತು. ಉತ್ತರವಾಗಿ ಆರ್‌ಸಿಬಿ 15 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 115 ರನ್ ಗಳಿಸಿ ಏಳು ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯದ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರ ಸ್ಮರಣೀಯ ಆಲ್‌ರೌಂಡ್ ಪ್ರದರ್ಶನದಿಂದಾಗಿ ಆರ್​ಸಿಬಿ ಪ್ಲೇಆಫ್‌ಗೆ ತಲುಪಿದೆ. ಎಲಿಮಿನೇಟರ್ ಪಂದ್ಯದಲ್ಲೂ ಮಹಿಳಾ ಆಟಗಾರ್ತಿಯರಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ದಿಶಾ ಕ್ಯಾಸಟ್, ಸಬ್ಬಿನೇನಿ ಮೇಘನಾ, ಆಶಾ ಶೋಭನಾ, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್‌ಹ್ಯಾಮ್, ನಡಿನ್ ಡಿ ಕ್ಲರ್ಕ್, ಶ್ರೇಯಾಂಕ ಪಾಟೀಲ್, ಶುಭಾ ಸತೀಶ್, ಸೋಫಿ ಡಿವೈನ್, ಇಂದ್ರಾಣಿ ರಾಯ್, ರಿಚಾ ಘೋಷ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ರೇಣುಕಾ ಸಿಂಗ್, ಶ್ರದ್ಧಾ ಪೋಕರ್ಕರ್, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್, ಅಮನ್‌ದೀಪ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಅಲಿಸ್ಸಾ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ ವಾಂಗ್, ಜಿಂತಿಮಣಿ ಕಲಿತಾ, ಕೃತ್ನಾ ಬಾಲಕೃಷ್ಣನ್, ನಟಾಲಿ ಸೀವರ್ ಬ್ರಂಟ್, ಪೂಜಾ ವಸ್ತ್ರಾಕರ್, ಸಜೀವನ್ ಸಜ್ನಾ, ಪ್ರಿಯಾಂಕಾ ಬಾಲಾ, ಯಸ್ತಿಕಾ ಭಾಟಿಯಾ,  ಸೈಕಾ ಇಶಾಕ್, ಶಬ್ನಿಮ್ ಇಸ್ಮಾಯಿಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ