ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ (Women’s Premier League) ಎರಡನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 2 ರನ್ಗಳಿಂದ ಮಣಿಸಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಆರ್ಸಿಬಿ ನೀಡಿದ 157 ರನ್ಗಳ ಗುರಿ ಬೆನ್ನಟ್ಟಿದ ಯುಪಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಅಲಿಸ್ಸಾ ಹೀಲಿ 5 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ವೃಂದಾ ದಿನೇಶ್ ಕೂಡ 18 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ತಾಲಿಯಾ ಮೆಕ್‌ಗ್ರಾತ್ 22 ರನ್ಗಳ ಕೊಡುಗೆ ನೀಡಿದರೆ, ಸ್ಫೋಟಕ ಬ್ಯಾಟಿಂಗ್ ಮಾಡಿದ ಗ್ರೇಸ್ ಹ್ಯಾರಿಸ್ ಹಾಗೂ ಶ್ವೇತಾ ಸೆಹ್ರಾವತ್ ಕ್ರಮವಾಗಿ 38 ಹಾಗೂ 31 ರನ್ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಈ ಇಬ್ಬರು ಕ್ರೀಸ್ನಲ್ಲಿ ಇರುವವರೆಗೂ ಯುಪಿ ತಂಡ ಗೆಲುವಂತೆ ತೋರುತ್ತಿತ್ತು. ಆದರೆ ಈ ಇಬ್ಬರ ವಿಕೆಟ್ ಪತನದ ನಂತರ ತಂಡದ ಇನ್ನಿಂಗ್ಸ್ ಹಳ್ಳ ಹಿಡಿಯಿತು. ಕೊನೆಯಲ್ಲಿ ಪೂನಂ ಖೇಮ್ನಾರ್, ಕನ್ನಡತಿ ಶ್ರೇಯಾಂಕ ಪಾಟೀಲ್ ಓವರ್ನಲ್ಲಿ 3 ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಉಳಿದೆರಡು ಓವರ್ಗಳಲ್ಲಿ ಆರ್ಸಿಬಿ ರನ್ಗಳಿಗೆ ಕಡಿವಾಣ ಹಾಕಿದ ಕಾರಣ ಯುಪಿ ವಾರಿಯರ್ಸ್ ಸೋಲೊಪ್ಪೊಕೊಳ್ಳಬೇಕಾಯಿತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂಧಾನ ಹಾಗೂ ಸೋಫಿ ಡಿವೈನ್ಗೆ ಉತ್ತಮ ಆರಂಭ ಒದಗಿಸಲು ಸಾಧ್ಯವಾಗಲಿಲ್ಲ. ಮೂರನೇ ಓವರ್ನಲ್ಲೇ ಸ್ಫೋಟಕ ಬ್ಯಾಟರ್ ಸೋಫಿ ಕೇವಲ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ನಾಯಕಿ ಸ್ಮೃತಿ ಬ್ಯಾಟ್ 13 ರನ್ಗಳಿಗೆ ಸುಸ್ತಾಯಿತು. ಬಳಿಕ ಬಂದ ಎಲ್ಲಿಸ್ ಪೆರ್ರಿ ಕೂಡ 8 ರನ್ಗಳ ಪೆವಿಲಿಯನ್ ಸೇರಿಕೊಂಡರು.
ಇಲ್ಲಿಂದ ತಂಡದ ಇನ್ನಿಂಗ್ಸ್ ನಿಭಾಯಿಸುವ ಜವಬ್ದಾರಿ ಹೊತ್ತ ಸಬ್ಬಿನೇನಿ ಮೇಘನಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಸಿಡಿಲಬ್ಬದ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಈ ವೇಳೆ ಇಬ್ಬರೂ ಅರ್ಧಶತಕ ಸಿಡಿಸಿದಲ್ಲದೆ, ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಈ ಇಬ್ಬರ ಆಟದಿಂದಾಗಿ ಆರ್ಸಿಬಿ ತಂಡ 157 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಶೋಭಾನಾ ಆಶಾ, ರೇಣುಕಾ ಠಾಕೂರ್ ಸಿಂಗ್.
ಯುಪಿ ವಾರಿಯರ್ಜ್: ಅಲಿಸ್ಸಾ ಹೀಲಿ(ನಾಯಕಿ), ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಕಿರಣ್ ನವಗಿರೆ, ವೃಂದಾ ದಿನೇಶ್, ಪೂನಂ ಖೇಮ್ನಾರ್, ಶ್ವೇತಾ ಸೆಹ್ರಾವತ್, ಗ್ರೇಸ್ ಹ್ಯಾರಿಸ್, ಸೈಮಾ ಠಾಕೋರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 pm, Sat, 24 February 24