WPL 2024: ಕೊನೆಯ ಎಸೆತದಲ್ಲಿ ಸಿಕ್ಸ್​: ಮುಂಬೈ ಇಂಡಿಯನ್ಸ್​ಗೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on: Feb 24, 2024 | 8:04 AM

WPL 2024: ವುಮೆನ್ಸ್ ಪ್ರೀಮಿಯರ್ ಲೀಗ್​ನ 2ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸಿ ಹರ್ಮನ್​​ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಶುಭಾರಂಭ ಮಾಡಿದೆ.

WPL 2024: ಕೊನೆಯ ಎಸೆತದಲ್ಲಿ ಸಿಕ್ಸ್​: ಮುಂಬೈ ಇಂಡಿಯನ್ಸ್​ಗೆ ರೋಚಕ ಜಯ
Mumbai Indians
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ರೋಚಕ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (1) ಶಬ್ನಿಮ್ ಇಸ್ಮಾಯಿಲ್ ಎಸೆದ ಮೊದಲ ಓವರ್​ನಲ್ಲೇ ಕ್ಲೀನ್ ಬೌಲ್ಡ್ ಆಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಅಲೀಸ್ ಕ್ಯಾಪ್ಟಿ ಅರ್ಧಶತಕದ ಜೊತೆಯಾಟವಾಡಿದರು.

ಆದರೆ 25 ಎಸೆತಗಳಲ್ಲಿ 31 ರನ್ ಬಾರಿಸಿ ಲ್ಯಾನಿಂಗ್ ಸ್ಕೀವರ್ ಬ್ರಂಟ್​ಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಅಲೀಸ್ ಕ್ಯಾಪ್ಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್​ ಗತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಜೆಮಿಮಾ ರೊಡ್ರಿಗಸ್ ಜೊತೆಗೂಡಿ ಬಿರುಸಿನ ಜೊತೆಯಾಟವಾಡಿದ ಕ್ಯಾಪ್ಸಿ 53 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 75 ರನ್ ಬಾರಿಸಿದರು. ಈ ಹಂತದಲ್ಲಿ ಅಮೇಲಿಯಾ ಕೇರ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದರು.

ಇನ್ನು ಅಂತಿಮ ಹಂತದಲ್ಲಿ ಸ್ಪೋಟಕ ಇನಿಂಗ್ಸ್ ಆಡಿದ ಜೆಮಿಮಾ ಕೇವಲ 24 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 42 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 171 ರನ್ ಕಲೆಹಾಕಿತು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಯಿತು. ಮೊದಲ ಓವರ್​ನ 2ನೇ ಎಸೆತದಲ್ಲಿ ಹೇಲಿ ಮ್ಯಾಥ್ಯೂಸ್ (0) ವಿಕೆಟ್ ಪಡೆದು ಮರಿಝನ್ನೆ ಕಪ್ ಡೆಲ್ಲಿಗೆ ಮೊದಲ ಯಶಸ್ಸು ತಂದುಕೊಟ್ಟರು.

ಇದರ ಬೆನ್ನಲ್ಲೇ ಸ್ಕೀವರ್ ಬ್ರಂಟ್ (19) ಅರುಂಧತಿ ರೆಡ್ಡಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಯಾಸ್ತಿಕಾ ಭಾಟಿಯಾ 45 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 57 ರನ್ ಬಾರಿಸಿದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಹರ್ಮನ್​ಪ್ರೀತ್ ಕೌರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಕೌರ್ ಫೋರ್​ಗಳ ಸುರಿಮಳೆಗೈದರು. ಈ ಮೂಲಕ ಕೇವಲ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 55 ರನ್ ಬಾರಿಸಿದರು.

ಇದನ್ನೂ ಓದಿ: WPL 2024: ಚಿನ್ನಸ್ವಾಮಿಯಲ್ಲಿ ರಂಗೇರಿದ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ: ಬಾಲಿವುಡ್ ತಾರೆಯರ ಭರ್ಜರಿ ಸ್ಟೆಪ್ಸ್

ಪರಿಣಾಮ ಕೊನೆಯ ಓವರ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 12 ರನ್​ಗಳ ಅವಶ್ಯಕತೆಯಿತ್ತು. ಅಲೀಸ್ ಕ್ಯಾಪ್ಟಿ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಪೂಜಾ ವಸ್ತ್ರಾಕರ್ ಕ್ಯಾಚ್ ನೀಡಿ ಔಟಾದರು. 2ನೇ ಎಸೆತದಲ್ಲಿ ಅಮನ್​ಜೋತ್ ಕೌರ್ 2 ರನ್ ಕಲೆಹಾಕಿದರು. 3ನೇ ಎಸೆತದಲ್ಲಿ 1 ರನ್​.

ನಾಲ್ಕನೇ ಎಸೆತವನ್ನು ಎದುರಿಸಿದ ಹರ್ಮನ್​ಪ್ರೀತ್ ಕೌರ್ ಫೋರ್ ಬಾರಿಸಿದರು. ಐದನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. ಕೊನೆಯ ಎಸೆತದಲ್ಲಿ 5 ರನ್​ಗಳು ಬೇಕಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಸಂಜನಾ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಮುಂಬೈ ಇಂಡಿಯನ್ಸ್​ಗೆ ರೋಚಕ ಜಯ ತಂದುಕೊಟ್ಟರು.

ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್​ ಸೀಸನ್-2 ರ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 4 ವಿಕೆಟ್​ಗಳ ಜಯ ಸಾಧಿಸಿದೆ.