- Kannada News Photo gallery Cricket photos India need Joe root wickets in first session of Day 2 What is Rohit sharma master plan?
IND vs ENG 4th Test, Day 2: ಭಾರತಕ್ಕೆ ಬೇಕು ರೂಟ್ ವಿಕೆಟ್: ಎರಡನೇ ದಿನಕ್ಕೆ ರೋಹಿತ್ ಮಾಸ್ಟರ್ ಪ್ಲಾನ್ ಏನು?
India vs England 4th Test Day 2: ಜೋ ರೂಟ್ ಅವರ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿದೆ. ಇಂದಿನ ಎರಡನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದ್ದು, ರೋಹಿತ್ ಪಡೆ ಆದಷ್ಟು ಬೇಗ ರೂಟ್ ವಿಕೆಟ್ ಕೀಳಬೇಕಿದೆ. ಅತ್ತ ಆಂಗ್ಲರು ಕೂಡ ತಂಡದ ಮೊತ್ತವನ್ನು 400ರ ಗಡಿಯತ್ತ ತಲುಪಿಸಲು ಎದುರು ನೋಡುತ್ತಿದ್ದಾರೆ.
Updated on: Feb 24, 2024 | 6:55 AM

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ದಿನದ ಆರಂಭದಲ್ಲಿ ಟೀಮ್ ಇಂಡಿಯಾ ಮಾರಕ ಬೌಲಿಂಗ್ ನಡೆಸಿ ಯಶಸ್ಸು ಕಂಡರೂ ನಂತರ ಜೋ ರೂಟ್ ಅವರ ಆಕರ್ಷಕ ಶತಕದ ನೆರವಿನಿಂದ ಆಂಗ್ಲರು ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಆಕಾಶ್ ದೀಪ್ ಒಂದರ ಹಿಂದೆ ಒಂದರಂತೆ ಆಘಾತ ನೀಡಿದರು. ಭರ್ಜರಿ ಫಾರ್ಮ್ನಲ್ಲಿದ್ದ ಬೆನ್ ಡಕೆಟ್ 11 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರೆ, ಬಂದ ಬೆನ್ನಲ್ಲೇ ಒಲೀ ಪೋಪ್ ಅವರು ಆಕಾಶ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ಅತ್ತ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಝಾಕ್ ಕ್ರಾಲಿ (42) ಅವರನ್ನು ದೀಪ್ ಕ್ಲೀನ್ ಬೌಲ್ಡ್ ಮಾಡಿದರು.

ಬಳಿಕ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆದರೆ, ಈ ಸಂದರ್ಭ ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿಗೆ 38 ರನ್ ಗಳಿಸಿದ್ದ ಬೈರ್‌ಸ್ಟೋವ್ ಬಲಿಯಾದರು. ನಾಯಕ ಬೆನ್ ಸ್ಟೋಕ್ಸ್ ಕೂಡ 3 ರನ್ಗೆ ನಿರ್ಗಮಿಸಿದರು. ಆದರೆ ಒಂದು ತುದಿಯಲ್ಲಿ ಜೋ ರೂಟ್ ಸಮಯೋಜಿತ ಬ್ಯಾಟಿಂಗ್ ನಡೆಸಿದರು.

ಜೋ ರೂಟ್ಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫೋಕ್ಸ್ ಉತ್ತಮ ಸಾಥ್ ನೀಡಿದರು. ಈ ಹಂತದಲ್ಲಿ ಅರ್ಧಶತಕ ಪೂರೈಸಿದ ರೂಟ್ ಶತಕದತ್ತ ದಾಪುಗಾಲಿಟ್ಟರು. ಆದರೆ ಬೆನ್ ಫೋಕ್ಸ್ 47 ರನ್ಗಳಿಗೆ ವಿಕೆಟ್ ಒಪ್ಪಿಸಿ, ಅರ್ಧಶತಕದಿಂದ ವಂಚಿತರಾದರು. ಬಳಿಕ ಬಾಲಂಗೋಚಿಗಳಿಂದ ಸಹಾರ ಪಡೆದ ರೂಟ್, ಮೊದಲ ದಿನದಾಟದಂತ್ಯಕ್ಕೆ ಶತಕ ಸಿಡಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬೌಲಿಂಗ್ ಆಲ್‌ರೌಂಡರ್ ಓಲಿ ರಾಬಿನ್ಸನ್ ಕೂಡ 31 ರನ್ ಕಲೆಹಾಕಿ ಅಜೇಯರಾಗಿ ಕ್ರೀಸ್ನಲ್ಲಿ ಉಳಿದಿದ್ದಾರೆ. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರೂಟ್, 226 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ಅಜೇಯ 106 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ಭಾರತ ಪರ ಆಕಾಶ್ ದೀಪ್ 3, ಮೊಹಮ್ಮದ್ ಸಿರಾಜ್ 2 ಮತ್ತು ಅಶ್ವಿನ್-ಜಡೇಜಾ 1 ವಿಕೆಟ್ ಪಡೆದಿದ್ದಾರೆ.
