‘ಡ್ರೀಮ್ ಕಾರನ್ನು ಗಿಫ್ಟ್ ಮಾಡ್ತೀನಿ’; ಹರಾಜಿನಲ್ಲಿ 1.30 ಕೋಟಿ ರೂ ಪಡೆದ ಕನ್ನಡತಿ ವೃಂದಾ ದಿನೇಶ್ ಹೇಳಿದ್ದೇನು ಗೊತ್ತಾ?

|

Updated on: Dec 11, 2023 | 10:14 AM

WPL 2024: ಡಿಸೆಂಬರ್ 9 ರಂದು ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ ಮಿನಿ ಹರಾಜಿನಲ್ಲಿ ಬರೋಬ್ಬರಿ 1.30 ಕೋಟಿ ರೂ.ಗೆ ಮಾರಾಟವಾದ ಕನ್ನಡತಿ ವೃಂದಾ ದಿನೇಶ್ ಮೊದಲ ಬಾರಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

‘ಡ್ರೀಮ್ ಕಾರನ್ನು ಗಿಫ್ಟ್ ಮಾಡ್ತೀನಿ’; ಹರಾಜಿನಲ್ಲಿ 1.30 ಕೋಟಿ ರೂ ಪಡೆದ ಕನ್ನಡತಿ ವೃಂದಾ ದಿನೇಶ್ ಹೇಳಿದ್ದೇನು ಗೊತ್ತಾ?
ಕನ್ನಡತಿ ವೃಂದಾ ದಿನೇಶ್
Follow us on

ಡಿಸೆಂಬರ್ 9 ರಂದು ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ ಮಿನಿ ಹರಾಜಿನಲ್ಲಿ (Women’s Premier League auction) ಬರೋಬ್ಬರಿ 1.30 ಕೋಟಿ ರೂ.ಗೆ ಮಾರಾಟವಾದ ಕನ್ನಡತಿ ವೃಂದಾ ದಿನೇಶ್ (Vrinda Dinesh) ಮೊದಲ ಬಾರಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವೃಂದಾ, ಹರಾಜಿನ ನಂತರ ನಾನು ತುಂಬಾ ಭಾವೋದ್ವೇಗಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ. ವಾಸ್ತವವಾಗಿ ಶನಿವಾರ ನಡೆದ ಡಬ್ಲ್ಯುಪಿಎಲ್ ಹರಾಜಿನಲ್ಲಿ ಇಪ್ಪತ್ತೆರಡು ವರ್ಷದ ವೃಂದಾ ದಿನೇಶ್ ಅವರನ್ನು ಯುಪಿ ವಾರಿಯರ್ಸ್ (UP Warriorz) ಫ್ರಾಂಚೈಸ್ 1.30 ಕೋಟಿ ರೂಗೆ ಖರೀದಿ ಮಾಡಿತ್ತು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಅಧಿಕ ಮೊತ್ತಕ್ಕೆ ಬಿಕರಿಯಾದ ಎರಡನೇ ಅನ್‌ಕ್ಯಾಪ್ಡ್ (ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದ) ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ವೃಂದಾ ಪಾತ್ರರಾದರು.

ತಾಯಿಗೆ ಕರೆ ಮಾಡಲು ಸಾಧ್ಯವಾಗಿಲ್ಲ

ಅಧಿಕ ಮೊತ್ತಕ್ಕೆ ಮಾರಾಟವಾದ ಬಗ್ಗೆ ತಮ್ಮ ಮನದಾಳ ಹಂಚಿಕೊಂಡಿರುವ ವೃಂದಾ, ಯುಪಿ ವಾರಿಯರ್ಸ್ ಫ್ರಾಂಚೈಸ್ ನನ್ನನ್ನು ಖರೀದಿಸಿದಾಗ ನನಗೆ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಾನು ಸದ್ಯ ರಾಯಪುರದಲ್ಲಿದ್ದೇನೆ. ಹರಾಜಿನ ಬಳಿಕ ನಾನು ನನ್ನ ತಾಯಿಗೆ ಇನ್ನು ಕರೆ ಮಾಡಿಲ್ಲ. ಬಹುಶಃ ನಾನು ಖರೀದಿಯಾಗಿರುವುದು ನನ್ನ ತಾಯಿಗೆ ಬಹಳ ಸಂತೋಷ ತಂದಿರುತ್ತದೆ. ಅವರು ಖಂಡಿತ ಕಣ್ಣೀರಿಟ್ಟಿರುತ್ತಾರೆ. ಅವರ ಕಣ್ಣೀರನ್ನು ನನ್ನಿಂದ ನೋಡಲು ಆಗಲ್ಲ. ಹಾಗಾಗಿ ನಾನು ಅವರಿಗೆ ಕರೆ ಮಾಡಿಲ್ಲ ಎಂದಿದ್ದಾರೆ.

ಡ್ರೀಮ್ ಕಾರನ್ನು ಗಿಫ್ಟ್ ಮಾಡ್ತೀನಿ

ಇನ್ನು ಮಿನಿ ಹರಾಜಿನಲ್ಲಿ ಅಧಿಕ ಮೊತ್ತ ಪಡೆದಿರುವ ವೃಂದಾ ಅವರನ್ನು, ಈ ಮೊತ್ತವನ್ನು ಏನು ಮಾಡುತ್ತೀರಿ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ನಾನು ಈಗಾಗಲೇ ಅದರ ಬಗ್ಗೆ ಯೋಚಿಸಿದ್ದೇನೆ. ನನ್ನ ಹೆತ್ತವರಿಗೆ ನಾನು ಅವರ ಕನಸಿನ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ. ಈ ಸಮಯದಲ್ಲಿ ಇದು ನನ್ನ ಮೊದಲ ಗುರಿಯಾಗಿದೆ ಎಂದಿದ್ದಾರೆ.

ರಾಯಪುರದಲ್ಲಿರುವ ವೃಂದಾ

ವೃಂದಾ ಪ್ರಸ್ತುತ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿಗೆ ತಯಾರಿ ನಡೆಸಲು ರಾಯ್‌ಪುರದಲ್ಲಿದ್ದಾರೆ. ಇನ್ನು ಅಧಿಕ ಮೊತ್ತ ಪಡೆದಿರುವುದು ಆಟದ ಮೇಲೆ ಪ್ರಭಾವ ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ವೃಂದಾ, ಇಷ್ಟು ಮೊತ್ತಕ್ಕೆ ಮಾರಾಟ ಆಗುವುದು ನನ್ನ ಕೈಲಿಲ್ಲ. ನನ್ನನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹೀಗಾಗಿ ನಾನು ನನ್ನ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಲು ಬಯಸುತ್ತೇನೆ. ಅಧಿಕ ಬೆಲೆ ಪಡೆದಿರುವುದು ನನ್ನ ಆಟದ ಮೇಲೆ ಹೆಚ್ಚು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ಆಟವನ್ನು ಆಡಲು ಮತ್ತು ಆನಂದಿಸಲು ಬಯಸುತ್ತೇನೆ ಎಂದಿದ್ದಾರೆ.

ಆರಂಭಿಕರಾಗಿ ಕಣಕ್ಕಿಳಿಯುವ ಆಸೆ

ನಾಯಕಿ ಅಲಿಸ್ಸಾ ಹೀಲಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವುದು ನನ್ನ ಬಯಕೆಯಾಗಿದೆ ಎಂದಿರುವ ವೃಂದಾ, ‘ಮಹಿಳಾ ಕ್ರಿಕೆಟ್‌ನ ಶ್ರೇಷ್ಠ ಆಟಗಾರ್ತಿಯಾಗಿರುವ ತಹ್ಲಿಯಾ ಮೆಕ್‌ಗ್ರಾತ್, ಡ್ಯಾನಿ ವ್ಯಾಟ್ ಮತ್ತು ಸೋಫಿ ಎಕ್ಲೆಸ್ಟೋನ್ ತಂಡದಲ್ಲಿ ಅಲಿಸ್ಸಾ ಹೀಲಿ ನಾಯಕತ್ವದಲ್ಲಿ ಆಡುವುದು ಅದ್ಭುತವಾಗಿದೆ. ನಾನು ಯಾವಾಗಲೂ ಅವರೊಂದಿಗೆ ಆಡುವ ಬಗ್ಗೆ ಯೋಚಿಸುತ್ತಿದ್ದೆ. ಆ ಸಂದರ್ಭ ಈಗ ಒದಗಿ ಬಂದಿದೆ. ಈ ರೀತಿಯ ಅವಕಾಶ ಒದಗಿ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Mon, 11 December 23