
ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನ 7 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ತವರು ನೆಲದಲ್ಲಿ ಆರ್ಸಿಬಿಗೆ ಇದು ಮೊದಲ ಪಂದ್ಯವಾಗಿರುವ ಕಾರಣ ಗೆಲುವಿನ ಲಯವನ್ನು ಮುಂದುವರೆಸುವುದರೊಂದಿಗೆ ತವರಿನಲ್ಲಿ ಗೆಲುವಿನ ಶುಭಾರಂಭ ಮಾಡುವ ಇರಾದೆಯಲ್ಲಿ ಸ್ಮೃತಿ ಮಂಧಾನ ಪಡೆ ಇದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ ಕಳೆದ ಪಂದ್ಯದ ಸೋಲಿನ ಸರಪಳಿಯನ್ನು ಮುರಿದು ಜಯದ ಹಾದಿಗೆ ಮರಳಲು ಎದುರು ನೋಡುತ್ತಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಇದರೊಂದಿಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.
ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 200 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಆರ್ಸಿಬಿ, ಆ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಹ ಸುಲಭವಾಗಿ ಸೋಲಿಸಿತ್ತು. ಈ ಮೂಲಕ ಸ್ಮೃತಿ ಮಂಧಾನ ನೇತೃತ್ವದ ತಂಡ ನಾಲ್ಕು ಅಂಕಗಳನ್ನು ಹೊಂದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರ್ಸಿಬಿಯನ್ನು ಹೊರತುಪಡಿಸಿ ಟೂರ್ನಿಯಲ್ಲಿ ಬೇರೆ ಯಾವುದೇ ತಂಡ ಇದುವರೆಗೆ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲೂ ಆರ್ಸಿಬಿಯೇ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.
ಇತ್ತ ಮುಂಬೈ ತಂಡ ತುಂಬಾ ಬಲಿಷ್ಠವಾಗಿದ್ದು, ಅವರನ್ನು ಸೋಲಿಸುವುದು ಸುಲಭವಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ, ನ್ಯಾಟ್ ಸಿವರ್-ಬ್ರಂಟ್ ಅವರ ಅತ್ಯುತ್ತಮ ಬ್ಯಾಟಿಂಗ್ (59 ಎಸೆತಗಳಲ್ಲಿ 80 ರನ್‌ಗಳು) ಮತ್ತು ಹರ್ಮನ್‌ಪ್ರೀತ್ ಅವರ 73 ರನ್‌ಗಳ ಪಾಲುದಾರಿಕೆಯ ಹೊರತಾಗಿಯೂ, ತಂಡವು ಸೋಲನ್ನು ಎದುರಿಸಬೇಕಾಯಿತು. ಈಗ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಬಲವಾದ ಪುನರಾಗಮನ ಮಾಡಲು ಬದ್ಧವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಡೇನಿಯಲ್ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ರಾಘವಿ ಬಿಸ್ಟ್, ಕನಿಕಾ ಅಹುಜಾ, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಏಕ್ತಾ ಬಿಶ್ತ್, ಜೋಶಿತಾ ವಿಜೆ, ರೇಣುಕಾ ಸಿಂಗ್ ಠಾಕೂರ್.
ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೇಲಿಯಾ ಕೆರ್, ಸಜೀವನ್ ಸಜ್ನಾ, ಜಿ ಕಮಲಿನಿ, ಅಮನ್‌ಜೋತ್ ಕೌರ್, ಸಂಸ್ಕೃತಿ ಗುಪ್ತಾ, ಶಬ್ನಮ್ ಇಸ್ಮಾಯಿಲ್, ಪರುಣಿಕಾ ಸಿಸೋಡಿಯಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Fri, 21 February 25