WPL 2025: ಬಲಿಷ್ಠ ಡೆಲ್ಲಿ ಎದುರು ಟಾಸ್ ಗೆದ್ದ ಆರ್​ಸಿಬಿ; 2ನೇ ಪಂದ್ಯಕ್ಕೆ ಸ್ಮೃತಿ ತಂಡದಲ್ಲಿ ಬದಲಾವಣೆ

WPL 2025: ವಡೋದರಾದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಕಳೆದ ವರ್ಷದ ಫೈನಲಿಸ್ಟ್‌ಗಳಾದ ಈ ಎರಡು ತಂಡಗಳ ನಡುವಿನ ಪಂದ್ಯದ ಮೇಲೆ ಭಾರಿ ನಿರೀಕ್ಷೆಯಿದೆ. ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ತಮ್ಮ ಆಡುವ ಬಳಗದಲ್ಲಿ ಬದಲಾವಣೆಗಳನ್ನು ಮಾಡಿವೆ.

WPL 2025: ಬಲಿಷ್ಠ ಡೆಲ್ಲಿ ಎದುರು ಟಾಸ್ ಗೆದ್ದ ಆರ್​ಸಿಬಿ; 2ನೇ ಪಂದ್ಯಕ್ಕೆ ಸ್ಮೃತಿ ತಂಡದಲ್ಲಿ ಬದಲಾವಣೆ
Rcb Vs Dc

Updated on: Feb 17, 2025 | 7:20 PM

ವಡೋದರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಪಂದ್ಯದಲ್ಲಿ ಇಂದು ಕಳೆದ ಬಾರಿಯ ಫೈನಲಿಸ್ಟ್​ ತಂಡಗಳಾದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಕಳೆದ ಬಾರಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ್ದ ಆರ್​ಸಿಬಿ ಮಹಿಳಾ ಪಡೆ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಅದೇ ಗೆಲುವಿನ ಸರಣಿಯನ್ನು ಮುಂದುವರೆಸುವ ಇರಾದೆಯಲ್ಲಿ ಸ್ಮೃತಿ ಪಡೆ ಇದ್ದರೆ, ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಡೆಲ್ಲಿ ತಂಡ ಕಣಕ್ಕಿಳಿಯುತ್ತಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಎರಡೂ ತಂಡಗಳಲ್ಲಿ ಬದಲಾವಣೆ

ಮೇಲೆ ಹೇಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ಈ ಪಂದ್ಯಕ್ಕಾಗಿ ಆರ್‌ಸಿಬಿ ಪ್ಲೇಯಿಂಗ್-11 ರಲ್ಲಿ ಒಂದು ಬದಲಾವಣೆ ಮಾಡಿದ್ದು, ಏಕ್ತಾ ತಂಡಕ್ಕೆ ಮರಳಿದ್ದಾರೆ. ಇತ್ತ ಟಾಸ್ ಸೋತ ದೆಹಲಿ ತಂಡವು ಎರಡು ಬದಲಾವಣೆಗಳನ್ನು ಮಾಡಿದೆ. ಕ್ಯಾಪ್ಸಿ ಮತ್ತು ಜೆಸ್ ಜಾನ್ಸನ್ ದೆಹಲಿ ತಂಡಕ್ಕೆ ಮರಳಿದ್ದು, ಕ್ಯಾಪ್ಸಿ ಮತ್ತು ನಿಕಿ ಈ ಪಂದ್ಯದಿಂದ ಹೊರಬಿದ್ದಿದ್ದಾರೆ.

ಬಲಿಷ್ಠ ತಂಡಗಳ ಮುಖಾಮುಖಿ

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಗುಜರಾತ್ ಜೈಂಟ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಜಯ ಸಾಧಿಸಿತು. ಉತ್ತಮ ಆರಂಭ ಎರಡೂ ತಂಡಗಳ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಒಂದೆಡೆ ಆರ್‌ಸಿಬಿ ತಂಡವು ವಿಶೇಷವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹೆಚ್ಚು ಸಮತೋಲಿತವಾಗಿ ಕಾಣುತ್ತಿದೆ. ಮತ್ತೊಂದೆಡೆ, ದೆಹಲಿಯ ಬ್ಯಾಟಿಂಗ್ ಲೈನ್ ಅಪ್ ತುಂಬಾ ಬಲಿಷ್ಠವಾಗಿದ್ದು, ಅವರನ್ನು ನಿಯಂತ್ರಿಸಲು ಆರ್‌ಸಿಬಿ ಬೌಲರ್‌ಗಳು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕಾಗುತ್ತದೆ.

ಉಭಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸ್ಸೆನ್, ಮರಿಜಾನ್ನೆ ಕಪ್, ಸಾರಾ ಬ್ರೈಸ್ (ವಿಕೆಟ್ ಕೀಪರ್), ಶಿಖಾ ಪಾಂಡೆ, ರಾಧಾ ಯಾದವ್, ಅರುಂಧತಿ ರೆಡ್ಡಿ, ಮಿನು ಮಣಿ.

ಆರ್‌ಸಿಬಿ: ಸ್ಮೃತಿ ಮಂಧಾನ (ನಾಯಕಿ), ಡೇನಿಯಲ್ ವೈಟ್, ಎಲ್ಲಿಸ್ ಪೆರ್ರಿ, ರಾಘವಿ ಬಿಶ್ಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಏಕ್ತಾ ಬಿಶ್ಟ್, ಜೋಶಿತಾ ವಿಜೆ, ರೇಣುಕಾ ಠಾಕೂರ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Mon, 17 February 25