WPL 2025: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋತ ಮುಂಬೈ ಇಂಡಿಯನ್ಸ್

WPL 2025: ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್‌ನ 13ನೇ ಪಂದ್ಯದಲ್ಲಿ ದೆಹಲಿ ಸುಲಭ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಮುಂಬೈ 123 ರನ್‌ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಡೆಲ್ಲಿ ಪರ ಶಫಾಲಿ ವರ್ಮಾ (43) ಮತ್ತು ಮೆಗ್ ಲ್ಯಾನಿಂಗ್ (60*) ಅಮೋಘ ಬ್ಯಾಟಿಂಗ್ ನಡೆಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಈ ಗೆಲುವಿನೊಂದಿಗೆ ದೆಹಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

WPL 2025: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋತ ಮುಂಬೈ ಇಂಡಿಯನ್ಸ್
Delhi Capitals

Updated on: Feb 28, 2025 | 10:55 PM

ಮಹಿಳಾ ಪ್ರೀಮಿಯರ್ ಲೀಗ್‌ನ (WPL 2025) 13 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Mumbai Indians vs Delhi Capitals) ನಡುವೆ ನಡೆಯಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದೆಹಲಿ ನಾಯಕಿ ಮೆಗ್ ಲ್ಯಾನಿಂಗ್ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ ನಿಯಮಿತ ಅಂತರದಲ್ಲಿ ವಿಕೆಟ್ ಕೈಚೆಲ್ಲಿ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 123 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ಟಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ಇನ್ನು 33 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.

ಮುಂಬೈ ಪೆವಿಲಿಯನ್ ಪರೇಡ್

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಯಸ್ತಿಕಾ ಭಾಟಿಯಾ ಮತ್ತು ಹೇಲಿ ಮ್ಯಾಥ್ಯೂಸ್ 35 ರನ್‌ಗಳ ಜೊತೆಯಾಟ ನೀಡಿದರು. ಆದರೆ ಈ ಜೊತೆಯಾಟವನ್ನು ಶಿಖಾ ಪಾಂಡೆ ಮುರಿದರು. ಯಸ್ತಿಕಾ ಭಾಟಿಯಾ ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಸದರ್ಲ್ಯಾಂಡ್ ಬೌಲಿಂಗ್​ನಲ್ಲಿ 22 ರನ್ ಬಾರಿಸಿದ್ದ ಮ್ಯಾಥ್ಯೂಸ್ ವಿಕೆಟ್ ಒಪ್ಪಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಇನ್ನಿಂಗ್ಸ್ ಕೂಡ 22 ರನ್​ಗಳಿಗೆ ಅಂತ್ಯವಾಯಿತು.

ಡೆಲ್ಲಿ ಬೌಲಿಂಗ್ ಮ್ಯಾಜಿಕ್

ಉಳಿದಂತೆ ಮುಂಬೈ ತಂಡದ ಬ್ಯಾಟಿಂಗ್ ವಿಭಾಗ ಉತ್ತಮ ಆರಂಭ ಪಡೆದಿತ್ತಾದರೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿತು. ತಂಡದ ಪರ ಅಮೇಲಿಯಾ ಕರ್ 17, ಸಜೀವನ್ ಸಜ್ನಾ ಐದು, ಜಿ ಕಮಲಿನಿ ಒಂದು, ಸಂಸ್ಕೃತಿ ಗುಪ್ತಾ ಮೂರು ಮತ್ತು ಅಮನ್‌ಜೋತ್ ಕೌರ್ 17* ರನ್ ಗಳಿಸಿ ತಂಡವನ್ನು 123 ರನ್​ಗಳಿಗೆ ಕೊಂಡೊಯ್ದರು. ದೆಹಲಿ ಪರ ಜೆಸ್ ಜೊನಾಸನ್ ಮತ್ತು ಮಿನ್ನು ಮಣಿ ತಲಾ ಮೂರು ವಿಕೆಟ್ ಪಡೆದರೆ, ಶಿಖಾ ಪಾಂಡೆ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: WPL 2025: ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಬೇಡದ ದಾಖಲೆಗೆ ಕೊರಳೊಡ್ಡಿದ ಎಲ್ಲಿಸ್ ಪೆರ್ರಿ

ಶಫಾಲಿ- ಮೆಗ್ ಲ್ಯಾನಿಂಗ್ ಸ್ಫೋಟಕ ಬ್ಯಾಟಿಂಗ್

ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಆರಂಭಿಕರು ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳಿಂದ 43 ರನ್ ಬಾರಿಸಿದರಾದರೂ ಅರ್ಧಶತಕ ವಂಚಿತರಾದರು. ಮತ್ತೊಂದೆಡೆ, ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಜೆಮಿಮಾ ರೊಡ್ರಿಗಸ್ ಇನ್ನಿಂಗ್ಸ್ ಮುನ್ನಡೆಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಮೆಗ್ ಲ್ಯಾನಿಂಗ್ 49 ಎಸೆತಗಳಲ್ಲಿ 9 ಬೌಂಡರಿಗಳಿಂದ ಅಜೇಯ 60 ರನ್ ಗಳಿಸಿದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ 15 ನೇ ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪರಿಣಾಮವಾಗಿ, ಡೆಲ್ಲಿ ಕ್ಯಾಪಿಟಲ್ಸ್ ಎರಡು ಅಂಕಗಳನ್ನು ಗಳಿಸಿತು ಮಾತ್ರವಲ್ಲದೆ ನೆಟ್ ರನ್​ರೇಟ್​ನಲ್ಲೂ ಏರಿಕೆ ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮತ್ತೊಂದೆಡೆ, ಈ ಪಂದ್ಯದಲ್ಲಿ ಹೀನಾಯವಾಗಿ ಸೋತ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ