IND vs NZ: ಕಿವೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಫ್ಯಾನ್ಸ್ಗೆ ಸಿಹಿ ಸುದ್ದಿ ನೀಡಿದ ಕೆಎಲ್ ರಾಹುಲ್
Champions Trophy 2025: ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿದೆ. ಪಾಕಿಸ್ತಾನ ಪಂದ್ಯದಲ್ಲಿ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ಫಿಟ್ ಆಗಿದ್ದಾರೆ ಎಂದು ಕೆ.ಎಲ್. ರಾಹುಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಅಜೇಯ ಓಟ ಮುಂದುವರೆಸಿರುವ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಅದಕ್ಕೂ ಮುನ್ನ ರೋಹಿತ್ ಪಡೆ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಿದೆ. ಈ ಪಂದ್ಯ ಮಾರ್ಚ್ 2 ರಂದು ನಡೆಯಲಿದ್ದು, ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಂತಸ ಸುದ್ದಿ ಸಿಕ್ಕಿದೆ. ವಾಸ್ತವವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಅನುಭವಿ ವೇಗಿ ಮೊಹಮ್ಮದ್ ಶಮಿ (Mohammed Shami) ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಈ ಇಬ್ಬರು ಕಿವೀಸ್ ವಿರುದ್ಧ ಆಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೆ ಪಂದ್ಯಕ್ಕೂ ಮುನ್ನ ಈ ಇಬ್ಬರ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿರುವ ಕೆಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕೊನೆಯ ಪಂದ್ಯಕ್ಕೆ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಮಾರ್ಚ್ 2 ರ ಭಾನುವಾರ ದುಬೈನಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದು ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಎ ನ ಕೊನೆಯ ಪಂದ್ಯವಾಗಲಿದೆ. ಈ ಎರಡೂ ತಂಡಗಳು ಸೆಮಿಫೈನಲ್ ತಲುಪಿದ್ದರೂ, ಈ ಪಂದ್ಯದ ಫಲಿತಾಂಶವು ಮೊದಲ ಸೆಮಿಫೈನಲ್‌ನಲ್ಲಿ ಯಾವ ತಂಡ ಆಡುತ್ತದೆ ಮತ್ತು ಎರಡನೇ ಸೆಮಿಫೈನಲ್‌ನಲ್ಲಿ ಯಾವ ತಂಡ ಆಡುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯವು ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.
ರೋಹಿತ್-ಶಮಿ ಫಿಟ್
ಪಂದ್ಯಕ್ಕೆ ಎರಡು ದಿನಗಳ ಮೊದಲು, ಟೀಂ ಇಂಡಿಯಾಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಅದೇನೆಂದರೆ ತಂಡದ ಇಬ್ಬರೂ ಅನುಭವಿಗಳು ಈ ಪಂದ್ಯಕ್ಕೆ ಲಭ್ಯವಿದ್ದಾರೆ. ಫೆಬ್ರವರಿ 28, ಶುಕ್ರವಾರ ನಡೆದ ಟೀಂ ಇಂಡಿಯಾದ ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಈ ಪ್ರಶ್ನೆಗೆ ಉತ್ತರಿಸುತ್ತಾ, ರೋಹಿತ್ ಮತ್ತು ಶಮಿ ಅವರ ಫಿಟ್ನೆಸ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಇಬ್ಬರೂ ಕೊನೆಯ ಪಂದ್ಯಕ್ಕೆ ಲಭ್ಯವಿದ್ದಾರೆ ಎಂದು ಹೇಳಿದರು. ಆದಾಗ್ಯೂ, ಇಬ್ಬರೂ ಅನುಭವಿ ಆಟಗಾರರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಸೆಮಿಫೈನಲ್ ಅನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ನೀಡಲಾಗುತ್ತದೆಯೇ ಎಂಬುದನ್ನು ರಾಹುಲ್ ಬಹಿರಂಗಪಡಿಸಲಿಲ್ಲ.
ಇದನ್ನೂ ಓದಿ: IND vs PAK: ಆರಂಭಿಕನಾಗಿ ರನ್ ಶಿಖರ; ವಿಶ್ವ ದಾಖಲೆ ಮುರಿದ ರೋಹಿತ್ ಶರ್ಮಾ
ಪಾಕಿಸ್ತಾನ ವಿರುದ್ಧ ಕಾಡಿದ ಇಂಜುರಿ
ಫೆಬ್ರವರಿ 23 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ ರೋಹಿತ್ ಮಂಡಿರಜ್ಜು ಸಮಸ್ಯೆಯನ್ನು ಎದುರಿಸಬೇಕಾಯಿತು. ಇದರಿಂದಾಗಿ, ರೋಹಿತ್ ದೀರ್ಘಕಾಲ ಮೈದಾನದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಉಪನಾಯಕ ಶುಭ್ಮನ್ ಗಿಲ್ ತಂಡವನ್ನು ಮುನ್ನಡೆಸಿದ್ದರು. ಆದಾಗ್ಯೂ, ಕೊಂಚ ಚೇತರಿಸಿಕೊಂಡಿದ್ದ ರೋಹಿತ್ ಬ್ಯಾಟಿಂಗ್‌ಗೆ ಬಂದಿದ್ದರು. ಇದರ ಹೊರತಾಗಿಯೂ, ಅವರ ಫಿಟ್ನೆಸ್ ಇನ್ನೂ ಪ್ರಶ್ನಾರ್ಹವಾಗಿದೆ.
ಮತ್ತೊಂದೆಡೆ, ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕೂಡ ಅದೇ ಪಂದ್ಯದಲ್ಲಿ ಫಿಟ್ನೆಸ್‌ನಲ್ಲಿ ತೊಂದರೆ ಅನುಭವಿಸುತ್ತಿರುವುದು ಕಂಡುಬಂದಿತು. ಅವರಿಗೆ ಮೊಣಕಾಲಿನಲ್ಲಿ ತೊಂದರೆ ಕಾಣಿಸಿಕೊಂಡಿತು, ಇದರಿಂದಾಗಿ ಅವರು ಆರಂಭಿಕ ಮೂರ್ನಾಲ್ಕು ಓವರ್‌ಗಳ ನಂತರ ಬಹಳ ಸಮಯದವರೆಗೆ ಮೈದಾನದಿಂದ ಹೊರಗಿದ್ದರು. ಆ ಬಳಿಕ ಬೌಲಿಂಗ್ ಮಾಡಿದ್ದ ಶಮಿ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Fri, 28 February 25