Ranji Trophy Final: ಅತಿ ಹೆಚ್ಚು ವಿಕೆಟ್ ಉರುಳಿಸಿ ಇತಿಹಾಸ ಸೃಷ್ಟಿಸಿದ 22 ವರ್ಷದ ಯುವ ಸ್ಪಿನ್ನರ್
Ranji Trophy Final: ವಿದರ್ಭ ಮತ್ತು ಕೇರಳ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ 22 ವರ್ಷದ ಹರ್ಷ್ ದುಬೆ ಅವರು ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಮುರಿದಿದ್ದಾರೆ. ಅವರು 69 ವಿಕೆಟ್‌ಗಳನ್ನು ಪಡೆದು ಅಶುತೋಷ್ ಅಮನ್ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಇನ್ನು ಈ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 37 ರನ್‌ಗಳ ಮುನ್ನಡೆ ಸಾಧಿಸಿದೆ.

ವಿದರ್ಭ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿದರ್ಭ ಹಾಗೂ ಕೇರಳ (Vidarbha vs Kerala) ನಡುವಿನ2024-25ರ ರಣಜಿ ಟ್ರೋಫಿ (Ranji Trophy) ಫೈನಲ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಇನ್ನಿಂಗ್ಸ್ ಆಡಿದ್ದು, ವಿದರ್ಭ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 37 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ತಂಡಕ್ಕೆ ಈ ಮುನ್ನಡೆ ತಂದುಕೊಡುವಲ್ಲಿ 22 ವರ್ಷದ ಸ್ಪಿನ್ ಬೌಲರ್ ಹರ್ಷ್ ದುಬೆ (Harsh Dubey) ಪ್ರಮುಖ ಪಾತ್ರವಹಿಸಿದ್ದಾರೆ. ಹರ್ಷ್ ದುಬೆ ರಣಜಿ ಟ್ರೋಫಿಯ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿದಿದ್ದಾರೆ. ಕೇರಳದ ಇನ್ನಿಂಗ್ಸ್‌ನಲ್ಲಿ ದುಬೆ 9 ನೇ ವಿಕೆಟ್ ಪಡೆಯುವುದರೊಂದಿಗೆ ಈ ಸೀಸನ್‌ನಲ್ಲಿ 69 ವಿಕೆಟ್ ಪೂರೈಸಿದರು. ಇದು ರಣಜಿ ಟ್ರೋಫಿಯ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯಾಗಿದೆ.
ಫೈನಲ್‌ನ ಮೂರನೇ ದಿನದಂದು ದಾಖಲೆ
ಫೆಬ್ರವರಿ 28, ಶುಕ್ರವಾರ ನಾಗ್ಪುರದಲ್ಲಿ ನಡೆದ ಫೈನಲ್ ಪಂದ್ಯದ ಮೂರನೇ ದಿನದಂದು, ಕೇರಳ 342 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಕೇರಳ ತಂಡವನ್ನು ಈ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಹರ್ಷ್ ದುಬೆ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯಾವಳಿಯಲ್ಲಿ ಈಗಾಗಲೇ ಸತತ ವಿಕೆಟ್‌ಗಳನ್ನು ಪಡೆದಿದ್ದ ಹರ್ಷ್ ದುಬೆ, ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದರು. ಇದೀಗ ಕೇರಳ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಹರ್ಷ್ ದುಬೆ 3 ವಿಕೆಟ್‌ಗಳನ್ನು ಕಬಳಿಸಿದರು.
ಈ ಮೂಲಕ ಹರ್ಷ್ ದುಬೆ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸರಿಗಟ್ಟಿದರು. ಈ ಮೊದಲು ಈ ದಾಖಲೆ ಬಿಹಾರದ ಅಶುತೋಷ್ ಅಮನ್ ಅವರ ಹೆಸರಿನಲ್ಲಿತ್ತು. ಅವರು 2018-19ರ ರಣಜಿಯಲ್ಲಿ ಗರಿಷ್ಠ 68 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ಆ ದಾಖಲೆಯನ್ನು ಹರ್ಷ್ ದುಬೆ ಮುರಿದಿದ್ದಾರೆ.
ಇದನ್ನೂ ಓದಿ: Ranji Trophy: 74 ವರ್ಷಗಳ ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಗೇರಿದ ಕೇರಳ
3 ವರ್ಷಗಳ ವೃತ್ತಿಜೀವನದಲ್ಲಿ ದಾಖಲೆ ಸೃಷ್ಟಿ
ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಹರ್ಷ್ ದುಬೆ ಅವರ ಈ ಸಾಧನೆ ವಿಶೇಷವಾಗಿದೆ ಏಕೆಂದರೆ ಅವರಿಗೆ ಇನ್ನೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಡಿಸೆಂಬರ್ 2022 ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ದುಬೆಗೆ ಇದು ಮೂರನೇ ರಣಜಿ ಸೀಸನ್. ಈ ಫೈನಲ್‌ಗೂ ಮೊದಲು ದುಬೆ ಕೇವಲ 17 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು 94 ವಿಕೆಟ್‌ಗಳನ್ನು ಪಡೆದಿದ್ದಾರೆ. ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ, ಹರ್ಷ್ 8 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ, ಹರ್ಷ್ 19 ಇನ್ನಿಂಗ್ಸ್‌ಗಳಲ್ಲಿ 16.98 ರ ಅತ್ಯುತ್ತಮ ಸರಾಸರಿಯಲ್ಲಿ 69 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ