ಲೀಗ್ ಹಂತದಲ್ಲೇ ಚಾಂಪಿಯನ್ಸ್ ಟ್ರೋಫಿಯಿಂದ ಔಟ್; ನಾಯಕತ್ವಕ್ಕೆ ಜೋಸ್ ಬಟ್ಲರ್ ಗುಡ್ಬೈ
Jos Buttler Resigns: ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಏಕದಿನ ನಾಯಕತ್ವಕ್ಕೆ ಜೋಸ್ ಬಟ್ಲರ್ ರಾಜೀನಾಮೆ ನೀಡಿದ್ದಾರೆ. ಗುಂಪು ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದ ಇಂಗ್ಲೆಂಡ್ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಬಟ್ಲರ್ ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡದ ಏಕದಿನ ಕ್ರಿಕೆಟ್‌ನಲ್ಲಿನ ಪ್ರದರ್ಶನವು ನಿರಾಶಾದಾಯಕವಾಗಿದ್ದು, ಟಿ20 ವಿಶ್ವಕಪ್ ಗೆಲುವಿನ ಹೊರತಾಗಿ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ ಏಕದಿನ ತಂಡಕ್ಕೆ ಯಾವುದೇ ಯಶಸ್ಸು ಸಿಗಲಿಲ್ಲ.

ಚಾಂಪಿಯನ್ಸ್ ಟ್ರೋಫಿಯನ್ನು (Champions Trophy 2025) ಗೆಲ್ಲುವ ತಂಡಗಳ ಪೈಕಿ ಸ್ಥಾನ ಪಡೆದು ಟೂರ್ನಿಗೆ ಕಾಲಿರಿಸಿದ್ದ ಮಾಜಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಟ್ರೋಫಿ ಗೆಲ್ಲುವುದಿರಲಿ, ಲೀಗ್ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡದ ಸೋಲಿನ ಹೊಣೆ ಹೊತ್ತು ತಂಡದ ನಾಯಕ ಜೋಸ್ ಬಟ್ಲರ್ (Jos Buttler) ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಇಂಗ್ಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆದರೆ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಿದ್ದ ಆಂಗ್ಲರು, ಈ ಪಂದ್ಯದಲ್ಲೂ ಸೋತಿದ್ದು, ತಂಡದ ಕಳಪೆ ಪ್ರದರ್ಶನಕ್ಕೆ ಕೈಗನ್ನಡಿಯಾಗಿತ್ತು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಕೊನೆಯ ಗುಂಪು ಪಂದ್ಯಕ್ಕೂ ಮುನ್ನ, ಬಟ್ಲರ್ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.
ನಾಯಕತ್ವ ತೊರೆದ ಬಟ್ಲರ್
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಜೋಸ್ ಬಟ್ಲರ್, ವೈಟ್-ಬಾಲ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಬಟ್ಲರ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆ ಬಳಿಕ ಮುಂದಿನ ಸರಣಿಗೆ ಇಂಗ್ಲೆಂಡ್ ಏಕದಿನ ತಂಡಕ್ಕೆ ನೂತನ ನಾಯಕನ ಆಯ್ಕೆ ನಡೆಯಲಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಬಟ್ಲರ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದರು.
Jos Buttler has announced he will step down as England Men’s white ball captain.
More details 👇
— England Cricket (@englandcricket) February 28, 2025
ಗೆಲುವಿಗಿಂತ ಸೋಲೇ ಹೆಚ್ಚು
ಬಟ್ಲರ್ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಸ್ಥಿತಿ ಶೋಚನೀಯವಾಗಿತ್ತು. 2023 ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿಯೂ ತಂಡ ಹೀನಾಯ ಸೋಲನುಭವಿಸಿತ್ತು. ಈಗ, ಸತತ ಎರಡನೇ ಐಸಿಸಿ ಟೂರ್ನಮೆಂಟ್‌ನಲ್ಲಿ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ. ಬಟ್ಲರ್ ಒಟ್ಟು 43 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ಅದರಲ್ಲಿ ತಂಡವು ಕೇವಲ 18 ಪಂದ್ಯಗಳಲ್ಲಿ ಗೆದ್ದಿದ್ದರೆ, 25 ಪಂದ್ಯಗಳಲ್ಲಿ ಸೋತಿದೆ. ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಬಟ್ಲರ್ ಅವರ ಬ್ಯಾಟಿಂಗ್ ಪ್ರದರ್ಶನವು ಅತ್ಯಂತ ನಿರಾಶಾದಾಯಕವಾಗಿತ್ತು. ಆಡಿದ 11 ಇನ್ನಿಂಗ್ಸ್‌ಗಳಲ್ಲಿ, ಬಟ್ಲರ್ 18 ರ ಸರಾಸರಿಯಲ್ಲಿ ಕೇವಲ 199 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದರು.
ಇದನ್ನೂ ಓದಿ: ENG vs AUS: 350 ರನ್ ಬಾರಿಸಿಯೂ ಸೋತ ಇಂಗ್ಲೆಂಡ್; ಆಸೀಸ್ಗೆ ಗೆಲುವು ತಂದ ಇಂಗ್ಲಿಸ್
ಬಟ್ಲರ್ ನಾಯಕತ್ವದಲ್ಲಿ ಟಿ20 ಚಾಂಪಿಯನ್
ಆದಾಗ್ಯೂ ಜೋಸ್ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ 2022 ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಆ ಬಳಿಕ 2024 ರಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ಇಂಗ್ಲೆಂಡ್ ಸೆಮಿಫೈನಲ್ ತಲುಪಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Fri, 28 February 25