IND vs ENG: ಸರಣಿ ನಡುವೆಯೇ ಇಂಗ್ಲೆಂಡ್ ತಂಡದಲ್ಲಿ ಹಠಾತ್ ಬದಲಾವಣೆ; ಯಾರು ಇನ್, ಯಾರು ಔಟ್?
India vs England ODI series: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಆಟಗಾರ ಜಾಕೋಬ್ ಬೆಥೆಲ್ ಗಾಯಗೊಂಡಿರುವ ಕಾರಣ ಟಾಮ್ ಬ್ಯಾಂಟನ್ ಅವರನ್ನು ಬದಲಿಯಾಗಿ ಆಯ್ಕೆ ತಂಡಕ್ಕೆ ಮಾಡಲಾಗಿದೆ. ಬೆಥೆಲ್ ಎಡ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ.ಹೀಗಾಗಿ ಬೆಥೆಲ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಮತ್ತು ಇಂಗ್ಲೆಂಡ್ ತಂಡಗಳು 3 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿವೆ. ಈ ಸರಣಿಯ ಮೊದಲ ಪಂದ್ಯವನ್ನು ಭಾರತ ಗೆದ್ದುಕೊಂಡಿದ್ದರೆ, ಇದೀಗ ಎರಡನೇ ಪಂದ್ಯ ಕಟಕ್‌ನಲ್ಲಿ ನಡೆಯುತ್ತಿದೆ. ಇದಾದ ನಂತರ ಎರಡೂ ತಂಡಗಳು ಅಹಮದಾಬಾದ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಪ್ರವಾಸಿ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ವಾಸ್ತವವಾಗಿ ಇಂಗ್ಲೆಂಡ್ ತಂಡದ ಯುವ ಆಟಗಾರ ಜಾಕೋಬ್ ಬೆಥೆಲ್ ಗಾಯದಿಂದ ಬಳಲುತ್ತಿದ್ದು, ಅವರ ಬ್ಯಾಕ್ಅಪ್ ಆಟಗಾರನಾಗಿ ಟಾಮ್ ಬ್ಯಾಂಟನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಸರಣಿಯ ನಡುವೆ ಬದಲಾವಣೆ
ಏಕದಿನ ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತನ್ನ ತಂಡದಲ್ಲಿ ಹೊಸ ಆಟಗಾರನನ್ನು ಸೇರಿಸಿಕೊಂಡಿದೆ. ವಾಸ್ತವವಾಗಿ, ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ಸಮಯದಲ್ಲಿ, ಇಂಗ್ಲೆಂಡ್ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಎಡ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಜಾಕೋಬ್ ಬೆಥೆಲ್ ಗಾಯಗೊಂಡ ಕಾರಣ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಟಾಮ್ ಬ್ಯಾಂಟನ್ ಅವರನ್ನು ಬ್ಯಾಕ್ಅಪ್ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಅಹಮದಾಬಾದ್ ತಲುಪಿದ ನಂತರ ಜಾಕೋಬ್ ಬೆಥೆಲ್ ಅವರ ಗಾಯದ ಬಗ್ಗೆ ಅಪ್ಡೇಟ್ ಹೊರಬೀಳಲಿದ್ದು, ಅವರು ಸರಣಿಯ ಕೊನೆಯ ಪಂದ್ಯದಿಂದ ಹೊರಗುಳಿದರೆ ಟಾಮ್ ಬ್ಯಾಂಟನ್ ಅವರಿಗೆ ಆಡುವ ಅವಕಾಶ ಸಿಗಬಹುದು.
ಟಾಮ್ ಬ್ಯಾಂಟನ್ ಆಗಸ್ಟ್ 2020 ರಲ್ಲಿ ಇಂಗ್ಲೆಂಡ್ ಪರ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ಈಗ 2020 ರ ನಂತರ ಮೊದಲ ಬಾರಿಗೆ ಅವರನ್ನು ಇಂಗ್ಲೆಂಡ್ ಏಕದಿನ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಯುಎಇಯಲ್ಲಿ ನಡೆಯುತ್ತಿರುವ ಐಎಲ್‌ಟಿ20 ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬ್ಯಾಂಟನ್ ಅವರನ್ನು ಏಕದಿನ ತಂಡದ ಸರಣಿಗೆ ಆಯ್ಕೆ ಮಾಡಲಾಗಿದೆ. ಐಎಲ್‌ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿರುವ ಬ್ಯಾಂಟನ್ 11 ಇನ್ನಿಂಗ್ಸ್‌ಗಳಲ್ಲಿ 54.77 ಸರಾಸರಿಯಲ್ಲಿ ಎರಡು ಶತಕ ಸೇರಿದಂತೆ 493 ರನ್ ಗಳಿಸಿದ್ದಾರೆ.
ಟಾಮ್ ಬ್ಯಾಂಟನ್ ಅಂತರರಾಷ್ಟ್ರೀಯ ವೃತ್ತಿಜೀವನ
ಟಾಮ್ ಬ್ಯಾಂಟನ್ ಇಂಗ್ಲೆಂಡ್ ತಂಡದ ಪರ ಇದುವರೆಗೆ 6 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 26.80 ಸರಾಸರಿಯಲ್ಲಿ 134 ರನ್ ಗಳಿಸಿದ್ದು, ಇದರಲ್ಲಿ 1 ಅರ್ಧಶತಕವೂ ಸೇರಿದೆ. ಅದೇ ಸಮಯದಲ್ಲಿ, ಟಾಮ್ ಬ್ಯಾಂಟನ್ ಇಂಗ್ಲೆಂಡ್ ಪರ 14 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 23.35 ಸರಾಸರಿ ಮತ್ತು 147.96 ಸ್ಟ್ರೈಕ್ ರೇಟ್‌ನಲ್ಲಿ 2 ಅರ್ಧಶತಕ ಸಹಿತ 327 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ