AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs AUS: 350 ರನ್ ಬಾರಿಸಿಯೂ ಸೋತ ಇಂಗ್ಲೆಂಡ್‌; ಆಸೀಸ್​ಗೆ ಗೆಲುವು ತಂದ ಇಂಗ್ಲಿಸ್

Champions Trophy 2025: ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಬೆನ್ ಡಕೆಟ್ ಅವರ 165 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಿಂದ ಇಂಗ್ಲೆಂಡ್ 351 ರನ್ ಗಳಿಸಿತು. ಆದರೆ ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅದ್ಭುತ ಜೊತೆಯಾಟದಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿತು.

ENG vs AUS: 350 ರನ್ ಬಾರಿಸಿಯೂ ಸೋತ ಇಂಗ್ಲೆಂಡ್‌; ಆಸೀಸ್​ಗೆ ಗೆಲುವು ತಂದ ಇಂಗ್ಲಿಸ್
ಆಸ್ಟ್ರೇಲಿಯಾ ತಂಡ
ಪೃಥ್ವಿಶಂಕರ
|

Updated on:Feb 22, 2025 | 11:24 PM

Share

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಡುವಿನ ನಿರ್ಣಾಯಕ 74 ರನ್‌ಗಳ ಜೊತೆಯಾಟದಿಂದಾಗಿ ಆಸ್ಟ್ರೇಲಿಯಾ ತಂಡ ಐದು ವಿಕೆಟ್​ಗಳ ಗೆಲುವು ದಾಖಲಿಸಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬೆನ್ ಡಕೆಟ್ ಅವರ 165 ರನ್‌ಗಳ ಬಲಿಷ್ಠ ಇನ್ನಿಂಗ್ಸ್‌ನ ಆಧಾರದ ಮೇಲೆ ಇಂಗ್ಲೆಂಡ್ 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 351 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು 47.3 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 356 ರನ್ ಕಲೆಹಾಕಿತು. ಆಸೀಸ್ ಪರ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಶತಕ ಬಾರಿಸಿದರೆ, ಮ್ಯಾಥ್ಯೂ ಶಾರ್ಟ್ ಮತ್ತು ಅಲೆಕ್ಸ್ ಕ್ಯಾರಿ ಅರ್ಧಶತಕಗಳ ಕಾಣಿಕೆ ನೀಡಿದರು.

ಡಕೆಟ್ ದಾಖಲೆಯ ಶತಕ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್​ಗೆ, ಆಸೀಸ್ ವೇಗಿ ಬೆನ್ ದ್ವಾರಶುಯಿಸ್ ಆರಂಭಿಕ ಆಘಾತ ನೀಡಿದರು. ಆದರೆ ಡಕೆಟ್ ಜೊತೆಗೂಡಿದ ಜೋ ರೂಟ್ ಶತಕದ ಜೊತೆಯಾಟವನ್ನಾಡಿ ಇಂಗ್ಲೆಂಡ್ ತಂಡಕ್ಕೆ ಚೇತರಿಕೆ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದು ಅದ್ಭುತವಾಗಿ ಬ್ಯಾಟ್ ಬೀಸಿದ ಡಕೆಟ್ 143 ಎಸೆತಗಳಲ್ಲಿ 17 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 165 ರನ್ ಗಳಿಸಿದರು. ಡಕೆಟ್ ಅವರ ಇನ್ನಿಂಗ್ಸ್ ಆಧಾರದ ಮೇಲೆಯೇ ಇಂಗ್ಲೆಂಡ್ 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 351 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ರೂಟ್ ಅರ್ಧಶತಕ

ಡಕೆಟ್ ಹೊರತುಪಡಿಸಿ, ಜೋ ರೂಟ್ 78 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 68 ರನ್ ಗಳಿಸಿದರು. ಮೂರನೇ ವಿಕೆಟ್‌ಗೆ ರೂಟ್ ಮತ್ತು ಡಕೆಟ್ 158 ರನ್‌ಗಳ ಜೊತೆಯಾಟ ಕೂಡ ನಡೆಸಿದರು. ಡಕೆಟ್ ಮತ್ತು ರೂಟ್ ಹೊರತುಪಡಿಸಿ, ಬೇರೆ ಯಾವುದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಈ ಇಬ್ಬರನ್ನು ಹೊರತುಪಡಿಸಿ, ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ 23, ಜೇಮೀ ಸ್ಮಿತ್ 15, ಲಿಯಾಮ್ ಲಿವಿಂಗ್‌ಸ್ಟೋನ್ 14, ಫಿಲ್ ಸಾಲ್ಟ್ 10, ಬ್ರೈಡನ್ ಕಾರ್ಸ್ 8 ಮತ್ತು ಹ್ಯಾರಿ ಬ್ರೂಕ್ 3 ರನ್ ಗಳಿಸಿದರು. ಕೊನೆಯಲ್ಲಿ ಜೋಫ್ರಾ ಆರ್ಚರ್ 10 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 21 ರನ್ ಗಳಿಸಿ ಅಜೇಯರಾಗಿ ಉಳಿದರೆ, ಆದಿಲ್ ರಶೀದ್ ಒಂದು ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್‌ಗೆ ಮರಳಿದರು.

ಆಸ್ಟ್ರೇಲಿಯಾ ಪರ ವೇಗಿ ದ್ವಾರಶುಯಿಸ್ 66 ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಸ್ಪಿನ್ನರ್‌ಗಳಾದ ಆಡಮ್ ಜಂಪಾ ಮತ್ತು ಮಾರ್ನಸ್ ಲಬುಶೇನ್ ತಲಾ ಎರಡು ವಿಕೆಟ್ ಪಡೆದರು. ಇವರಲ್ಲದೆ, ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಆಸೀಸ್​ಗೆ ಆರಂಭಿಕ ಆಘಾತ

ಇಂಗ್ಲೆಂಡ್ ತಂಡ ಕೂಡ ಆರಂಭದಲ್ಲಿಯೇ ಆಸ್ಟ್ರೇಲಿಯಾಕ್ಕೆ ದೊಡ್ಡ ಹೊಡೆತ ನೀಡಿತು. ಟ್ರಾವಿಸ್ ಹೆಡ್ 6 ರನ್ ಗಳಿಸಿ ಔಟಾದರು. ನಾಯಕ ಸ್ಟೀವನ್ ಸ್ಮಿತ್ 5 ಕೂಡ ರನ್ ಗಳಿಸಿ ಔಟಾದರು.  ಆದರೆ ಆ ಬಳಿಕ ಬಂದ ಮಾರ್ನಸ್ ಲ್ಯಾಬುಶೇನ್ 45 ಎಸೆತಗಳಲ್ಲಿ 5 ಬೌಂಡರಿಗಳಿಂದ 47 ರನ್ ಹಾಗೂ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ 66 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 9 ಬೌಂಡರಿಗಳೊಂದಿಗೆ 63 ರನ್ ಬಾರಿಸಿ ತಂಡವನ್ನು ಸಂಕಷ್ಟದಿಂದ ಹೊರತಂದರು. ಇವರ ಜೊತೆಗೆ ಅಲೆಕ್ಸ್ ಕ್ಯಾರಿ 63 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 69 ರನ್​ಗಳ ಕಾಣಿಕೆ ನೀಡಿದರು.

ಇಂಗ್ಲಿಸ್ ಸ್ಫೋಟಕ ಶತಕ

ಆರನೇ ವಿಕೆಟ್‌ಗೆ ಇಂಗ್ಲಿಸ್ ಮತ್ತು ಮ್ಯಾಕ್ಸ್‌ವೆಲ್ ಅಜೇಯ 74 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇಂಗ್ಲಿಸ್ 86 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಾಯದಿಂದ ಅಜೇಯ 120 ರನ್ ಗಳಿಸಿದರು. ಇದು ಇಂಗ್ಲಿಸ್ ಅವರ ಏಕದಿನ ವೃತ್ತಿಜೀವನದ ಮೊದಲ ಮತ್ತು ಮರೆಯಲಾಗದ ಶತಕವಾಗಿತ್ತು. ಮ್ಯಾಕ್ಸ್‌ವೆಲ್ 15 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ ಅಜೇಯ 32 ರನ್ ಗಳಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್, ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ, ಆದಿಲ್ ರಶೀದ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಲಾ 1 ವಿಕೆಟ್ ಪಡೆದರು. ಆದರೆ ಅದು ಯಾವುದೇ ಪ್ರಯೋಜನವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 pm, Sat, 22 February 25