WPL 2025: ಬ್ಯಾಟಿಂಗ್ ವೈಫಲ್ಯ; ತವರಿನಲ್ಲಿ ಹ್ಯಾಟ್ರಿಕ್ ಸೋಲುಂಡ ಆರ್‌ಸಿಬಿ
WPL 2025: ಮಹಿಳಾ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಕೇವಲ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಮೃತಿ ಮಂಧಾನ ಮತ್ತೊಮ್ಮೆ ನಿರಾಶೆಗೊಳಿಸಿದರೆ, ಎಲ್ಲಿಸ್ ಪೆರ್ರಿ ಶೂನ್ಯಕ್ಕೆ ಔಟಾದರು. ಗುಜರಾತ್‌ನ ಆಶ್ಲೇ ಗಾರ್ಡ್ನರ್ ಅವರ 58 ರನ್‌ಗಳ ಅದ್ಭುತ ಇನಿಂಗ್ಸ್ ಗೆಲುವಿಗೆ ಪ್ರಮುಖ ಕಾರಣವಾಯಿತು. ಈ ಸೋಲಿನೊಂದಿಗೆ ಆರ್‌ಸಿಬಿ ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನ 12 ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮಹಿಳಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡ ಇನ್ನು 21 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಆರ್‌ಸಿಬಿ, ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತ ಬೇಡದ ದಾಖಲೆಗೆ ಕೊರಳೊಡ್ಡಿದೆ.
ಆರ್‌ಸಿಬಿ ಕಳಪೆ ಬ್ಯಾಟಿಂಗ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಅತ್ಯಂತ ಕಳಪೆ ಆರಂಭ ಪಡೆಯಿತು. ತಂಡಕ್ಕೆ ಮೊದಲ ಹೊಡೆತ ಕೊಟ್ಟವರು ಡಿಯಾಂಡ್ರಾ ಡಾಟಿನ್. ಅವರು ಡ್ಯಾನಿ ವ್ಯಾಟ್ ಹಾಡ್ಜ್ ಅವರನ್ನು ಮೊದಲ ಓವರ್ನಲ್ಲೇ ಪೆವಿಲಿಯನ್ಗಟ್ಟಿದರು. ಇದಾದ ನಂತರ ಗುಜರಾತ್ ನಾಯಕಿ ಆಶ್ಲೀ ಗಾರ್ಡ್ನರ್, ಆರ್‌ಸಿಬಿ ಬ್ಯಾಟಿಂಗ್ ಬೆನ್ನೇಲುಬಾದ ಎಲ್ಲಿಸ್ ಪೆರ್ರಿಯನ್ನು ಶೂನ್ಯಕ್ಕೆ ಔಟ್ ಮಾಡಿದರು. ಸತತ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ನಾಯಕಿ ಸ್ಮೃತಿ ಮಂಧಾನ ಕೂಡ ಕೇವಲ 10 ರನ್ಗಳಿಗೆ ಸುಸ್ತಾದರು.
ಕನಿಕಾ ಏಕಾಂಗಿ ಹೋರಾಟ
ಆರ್‌ಸಿಬಿ ಪರ ಏಕಾಂಗಿ ಹೋರಾಟ ನೀಡಿದ ಕನಿಕಾ ಅಹುಜಾ 28 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 33 ರನ್ ಗಳಿಸಿದರು. ಅವರಲ್ಲದೆ, ರಾಘವಿ ಬಿಶ್ಟ್ 22 ರನ್, ರಿಚಾ ಘೋಷ್ ಒಂಬತ್ತು ಮತ್ತು ಕಿಮ್ ಗಾರ್ತ್ 14 ರನ್ ಗಳಿಸಿ ಔಟಾದರು. ಜಾರ್ಜಿಯಾ ವೇರ್‌ಹ್ಯಾಮ್ ಮತ್ತು ಸ್ನೇಹಾ ರಾಣಾ ಕ್ರಮವಾಗಿ 20 ಮತ್ತು 1 ರನ್ ಗಳಿಸಿ ಅಜೇಯರಾಗಿ ಉಳಿದರು. ಗುಜರಾತ್ ಪರ ಡಿಯಾಂಡ್ರಾ ಡಾಟಿನ್ ಮತ್ತು ತನುಜಾ ಕನ್ವರ್ ತಲಾ ಎರಡು ವಿಕೆಟ್ ಪಡೆದರೆ, ಆಶ್ಲೀ ಗಾರ್ಡ್ನರ್ ಮತ್ತು ಕಾಶ್ವಿ ಗೌತಮ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: WPL 2025: ಆರ್ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಸೇಡು ತೀರಿಸಿಕೊಳ್ಳುವ ತವಕದಲ್ಲಿ ಗುಜರಾತ್
ಗಾರ್ಡ್ನರ್ ಹೊಡಿಬಡಿ ಆಟ
ಈ ಗುರಿ ಬೆನ್ನಟ್ಟಿದ ಗುಜರಾತ್ಗೂ ಆರಂಭಿಕ ಆಘಾತ ಎದುರಾಯಿತು. ಆದರೆ ತಂಡದ ನಾಯಕಿ ಆಶ್ಲೇ ಗಾರ್ಡ್ನರ್ ಹೊಡಿಬಡಿ ಆಟದ ಮೂಲಕ ಆರ್‌ಸಿಬಿ ಪಾಳಯದಿಂದ ಗೆಲುವನ್ನು ಕಸಿದುಕೊಂಡರು. ಗಾರ್ಡ್ನರ್ ಕೇವಲ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 58 ರನ್ ಗಳಿಸಿ ತಂಡವನ್ನು ಜಯದತ್ತ ಮುನ್ನಡೆಸಿರು. ಗಾರ್ಡ್ನರ್ಗೆ ಸಾಥ್ ನೀಡಿದ ಫೋಬೆ ಲಿಚ್‌ಫೀಲ್ಡ್ 21 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರು. ಈ ಜೊತೆಯಾಟದೊಂದಿಗೆ ಗುಜರಾತ್ ತಂಡವು ಬೆಂಗಳೂರು ನೀಡಿದ್ದ ಸವಾಲನ್ನು 16.3 ಓವರ್‌ಗಳಲ್ಲಿ ಪೂರ್ಣಗೊಳಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 pm, Thu, 27 February 25