Prithvi Shaw: 25 ಬೌಂಡರಿಗಳ ಸಹಿತ 128 ರನ್; ತಂಡದಿಂದ ಹೊರಬಿದ್ದ ಬಳಿಕ ಬುದ್ಧಿ ಕಲಿತ ಪೃಥ್ವಿ ಶಾ
Prithvi Shaw: ತನ್ನ ಫಿಟ್‌ನೆಸ್ ಕೊರತೆಯಿಂದಾಗಿ ರಣಜಿ ಮತ್ತು ವಿಜಯ್ ಹಜಾರೆ ಟ್ರೋಫಿಗಳಿಂದ ಹೊರಗುಳಿದಿದ್ದ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಡಿವೈ ಪಾಟೀಲ್ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದು, 200 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ 128 ರನ್ ಗಳಿಸಿದ್ದಾರೆ.

ಫಿಟ್ನೆಸ್ ಕೊರತೆ ಹಾಗೂ ಕಳಪೆ ಫಾರ್ಮ್ನಿಂದಾಗಿ ವೃತ್ತಿಜೀವನ ಅಂತ್ಯವಾಗುವ ಆತಂಕದಲ್ಲಿರುವ ಟೀಂ ಇಂಡಿಯಾದ ಯುವ ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಇದೀಗ ದೇಶಿ ಟೂರ್ನಿಯತ್ತ ಮುಖಮಾಡಿದ್ದಾರೆ. ವಾಸ್ತವವಾಗಿ ಇದೇ ಫಾರ್ಮ್ ಹಾಗೂ ಫಿಟ್ನೆಸ್ ಕೊರತೆಯಿಂದಾಗಿ ಪೃಥ್ವಿಗೆ ರಣಜಿ ಟ್ರೋಫಿ (Ranji) ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಪೃಥ್ವಿ ಶಾ ಪ್ರಸ್ತುತ ಡಿವೈ ಪಾಟೀಲ್ ಟಿ20 ಲೀಗ್‌ನಲ್ಲಿ ಆಡುತ್ತಿದ್ದು, ಆಡಿರುವ ಎರಡು ಪಂದ್ಯಗಳಲ್ಲಿ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಪೃಥ್ವಿ ಆಡಿರುವ 2 ಪಂದ್ಯಗಳಲ್ಲಿ 200 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 2 ಸಿಕ್ಸರ್ ಮತ್ತು 25 ಬೌಂಡರಿಗಳ ಸಹಿತ 128 ರನ್ ಗಳಿಸಿದ್ದಾರೆ.
12 ಬೌಂಡರಿಗಳ ಸಹಿತ 63 ರನ್
ಡಿವೈ ಪಾಟೀಲ್ ಟಿ20 ಲೀಗ್‌ನಲ್ಲಿ ಟಾಟಾ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ 208 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪೃಥ್ವಿ ಶಾ, ನಾಯಕತ್ವದ ಇನ್ನಿಂಗ್ಸ್ ಆಡಿ ಕೇವಲ 36 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 63 ರನ್ ಬಾರಿಸಿದ್ದರು. ಪೃಥ್ವಿ ಹೊರತುಪಡಿಸಿ, ಅಥರ್ವ ಕೇಲ್ ಕೂಡ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ ಅಜೇಯ 94 ರನ್ ಕೆಲಹಾಕಿದ್ದರು.
25 ಎಸೆತಗಳಲ್ಲಿ ಅಜೇಯ 65 ರನ್
ಆ ಬಳಿಕ ನಡೆದ ಟೆಕ್ ಸ್ಪೋರ್ಟ್ಸ್ ತಂಡದ ವಿರುದ್ಧದ ಎರಡನೇ ಪಂದ್ಯದಲ್ಲೂ ಪೃಥ್ವಿ ಶಾ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಬಾರಿ ಅವರು 25 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದರು. ಶಾ ತಮ್ಮ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಕೇವಲ 27 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಅವರು 65 ರನ್‌ಗಳಲ್ಲಿ 64 ರನ್‌ಗಳನ್ನು ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಗಳಿಸಿದರು.
ಇದನ್ನೂ ಓದಿ:ಸೆಲ್ಫಿ ಗಲಾಟೆ: ಪೃಥ್ವಿ ಶಾಗೆ ಎದುರಾಯ್ತು ಸಂಕಷ್ಟ; ತನಿಖೆಗೆ ಕೋರ್ಟ್ ಆದೇಶ..!
ಪೃಥ್ವಿ ಶಾ ಇತ್ತೀಚಿನ ದಿನಗಳಲ್ಲಿ ತಮ್ಮ ಫಿಟ್ನೆಸ್ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ತುಂಬಾ ತೂಕ ಇಳಿಸಿಕೊಂಡಿದ್ದಾರೆ. ಪ್ರಸ್ತುತ, ಶಾ ಅವರಿಗೆ ಐಪಿಎಲ್ 2025 ರ ಯಾವುದೇ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಆದರೆ ಪಂದ್ಯಾವಳಿಯ ಮಧ್ಯದಲ್ಲಿ ಅವರಿಗೆ ಬದಲಿಯಾಗಿ ಅವಕಾಶ ಸಿಗಬಹುದು. ಪೃಥ್ವಿ ಶಾ ಉತ್ತಮ ಇನ್ನಿಂಗ್ಸ್ ನಿರಂತರವಾಗಿ ಆಡುವ ಮೂಲಕ ತಂಡಗಳ ಬಾಗಿಲು ತಟ್ಟುತ್ತಲೇ ಇರಬೇಕು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Thu, 27 February 25
